Yadgir | ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಖಂಡನೆ: ಯಾದಗಿರಿಗೆ ಬಂದರೆ ಕಪ್ಪು ಬಟ್ಟೆ ಪ್ರದರ್ಶನದ ಎಚ್ಚರಿಕೆ

ಛಲವಾದಿ ನಾರಾಯಣಸ್ವಾಮಿ
ಯಾದಗಿರಿ: ʼಬಿಜೆಪಿ ಅಧಿಕಾರಕ್ಕೆ ಬಂದರೆ ಕೆಲವು ದಲಿತ ನಾಯಕರು ಮನೆಗೆ ಹೋಗುವುದೇ ಇಲ್ಲ. ಹೋರಾಟ ಹೋರಾಟ ಸಾಯಂಕಾಲ ಆದ್ಮೇಲೆ ತೂರಾಟʼ ಎಂಬ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದಲಿತ ಹೋರಾಟಗಾರರ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಲಾಗಿದೆ ಎಂದು ಆರೋಪಿಸಿದ ಅವರು, ಪ್ಯಾಕೇಜ್ಗೆ ಗಂಟು ಬಿದ್ದು ಚಳವಳಿ ಮಾಡುತ್ತಾರೆ ಎಂಬ ಆರೋಪಕ್ಕೆ ಯಾವುದೇ ಆಧಾರವಿದ್ದರೆ ಸಂಬಂಧಪಟ್ಟವರ ಹೆಸರು ಮತ್ತು ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಆಧಾರವಿಲ್ಲದ ಸಾಮಾನ್ಯ ಆರೋಪಗಳಿಂದ ಸಮಾಜದ ಪರವಾಗಿ ನಿಷ್ಠೆಯಿಂದ ಹೋರಾಟ ನಡೆಸುತ್ತಿರುವ ದಲಿತ ಮುಖಂಡರ ಗೌರವಕ್ಕೆ ಧಕ್ಕೆ ಉಂಟಾಗುತ್ತದೆ. ದಲಿತ ಸಮುದಾಯದ ಹಕ್ಕುಗಳಿಗಾಗಿ ಅನೇಕ ಸಂಘಟನೆಗಳು ಮತ್ತು ಮುಖಂಡರು ತಮ್ಮ ಸಮಯ, ಶ್ರಮ ಹಾಗೂ ವೈಯಕ್ತಿಕ ತ್ಯಾಗದೊಂದಿಗೆ ಹೋರಾಟ ನಡೆಸುತ್ತಿದ್ದಾರೆ ಎಂದು ಶಿವಪುತ್ರ ಜವಳಿ ಹೇಳಿದರು.
ಟೀಕೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಅದು ಸತ್ಯಾಂಶ, ಸಾಕ್ಷ್ಯ ಮತ್ತು ಜವಾಬ್ದಾರಿಯುತ ಭಾಷೆಯ ಆಧಾರದ ಮೇಲೆ ಇರಬೇಕು. ಯಾವುದೇ ಪುರಾವೆಗಳಿಲ್ಲದೆ ಎಲ್ಲ ಹೋರಾಟಗಾರರ ಮೇಲೂ ಅನುಮಾನ ಮೂಡುವಂತೆ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅವರು ತಿಳಿಸಿದರು.
ಛಲವಾದಿ ನಾರಾಯಣಸ್ವಾಮಿ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಇಲ್ಲವಾದರೆ ಅವರು ಯಾದಗಿರಿಗೆ ಆಗಮಿಸಿದ ಸಂದರ್ಭದಲ್ಲಿ ಕಪ್ಪು ಬಟ್ಟೆ ಪ್ರದರ್ಶನ ನಡೆಸಲಾಗುವುದು ಎಂದು ಶಿವಪುತ್ರ ಜವಳಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮರೆಪ್ಪ ಕ್ರಾಂತಿ, ಭೀಮಶಂಕರ ಗುಂಡಹಳ್ಳಿ, ಸಂತೋಷ್ ಗುಂಡಹಳ್ಳಿ, ನಾಗರಾಜ ಕೋಡಮ್ಮನಹಳ್ಳಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.






