Yadagiri | ಯಂಪಾಡ್ ಗ್ರಾಮದಲ್ಲಿ ಶಾಂತಿ ಸಭೆ : ಜಾಗೃತಿ ಕಾರ್ಯಕ್ರಮ

ಯಾದಗಿರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ವತಿಯಿಂದ ದೌರ್ಜನ್ಯ ನಡೆದ ಯಂಪಾಡ್ ಗ್ರಾಮದಲ್ಲಿ ಶಾಂತಿ ಸಭೆ ಹಾಗೂ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚನ್ನಬಸವ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದ ಕಾನೂನುಗಳು ಹಾಗೂ ಅವುಗಳಡಿ ದೊರೆಯುವ ಹಕ್ಕುಗಳ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಗ್ರಾಮದ ಎಲ್ಲ ಸಮುದಾಯಗಳ ಜನರು ಪರಸ್ಪರ ಸಾಮರಸ್ಯ ಮತ್ತು ಸೌಹಾರ್ದದಿಂದ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಮರೆಪ್ಪ ಚಟ್ಟೆರಕರ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಗ್ರಾಮದ ಎಲ್ಲ ಜಾತಿ ಹಾಗೂ ಸಮುದಾಯದವರು ಸಹೋದರತ್ವದ ಭಾವನೆಯಿಂದ ಬದುಕಬೇಕು ಎಂದು ತಿಳಿಸಿದರು.
ಗುರುಮಿಟಕಲ್ ಪೊಲೀಸ್ ಠಾಣೆಯ ಪಿಎಸ್‌ಐ ಮಾತನಾಡಿ, ಗ್ರಾಮದಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆಗೆ ಅವಕಾಶ ನೀಡಬಾರದು. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಗ್ರಾಮಸ್ಥರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗುರುಮಿಟಕಲ್ ತಹಶೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ಸಿಆರ್ ಸೆಲ್ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.






