ಯಾದಗಿರಿ | ನಾರಾಯಣಪುರ ಜಲಾಶಯಕ್ಕೆ ಸೂಕ್ತ ರಕ್ಷಣೆ : ಡಿಸಿ ಹರ್ಷಿಲ್ ಭೋಯರ್

ಯಾದಗಿರಿ: ಜಿಲ್ಲೆಯ ನಾರಾಯಣಪುರ ಜಲಾಶಯಕ್ಕೆ ಸೂಕ್ತ ರಕ್ಷಣೆ ನೀಡಲಾಗುವುದು ಮತ್ತು ಅಲ್ಲಿ ಏನೇ ಅಕ್ರಮ ಚಟುವಟಿಕೆಗಳು ನಡೆದಿದ್ದರೇ ಅವುಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದೆಂದು ನೂತನ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳಿದರು.
ಗುರುವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳು ಸರ್ಕಾರದ ನಿಯಮಾನುಸಾರ ಕೆಲಸ ಮಾಡುತ್ತಿದ್ದು, ತಾವು ಕಳೆದ ಒಂದು ವಾರದಿಂದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ, ಕೆಲಸ ಕಾರ್ಯಗಳ ಸಮಗ್ರ ಮಾಹಿತಿ ಪಡೆಯುತ್ತಿದ್ದೆನೆ. ಬರುವ ದಿನಗಳಲ್ಲಿ ಜಿಲ್ಲೆಯ ಪ್ರತಿಯೊಂದರ ಬಗ್ಗೆ ತಿಳಿದುಕೊಂಡು ಸಚಿವ, ಶಾಸಕರ ಮತ್ತು ಸ್ಥಳಿಯ ಜನಪ್ರತಿನಿಧಿಗಳ ಸಹಕಾರದಿಂದ ಅಭಿವೃದ್ಧಿಗೆ ಒತ್ತು ನೀಡಲಾಗುವುದೆಂದರು.
ನಗರ ಸೇರಿದಂತೆಯೇ ಜಿಲ್ಲೆಯ ವಿವಿಧ ಸಮಸ್ಯೆಗಳು ಮತ್ತು ಬೇಡಿಕೆಗಳ ಬಗ್ಗೆ ಪತ್ರಕರ್ತರಿಂದ ಮಾಹಿತಿ ಪಡೆದು ಎಲ್ಲವನ್ನೂ ದಾಖಲಿಸಿಕೊಂಡ ಡಿಸಿ ಭೋಯರ್ ಅವರು, ನಿಮ್ಮ ಸಹಕಾರವು ಇರಲಿ ಎಂದರು.
ಶಿಕ್ಷಣ, ಆರೋಗ್ಯ, ಸಾರಿಗೆ ಹೀಗೆ ವಿವಿಧ ಇಲಾಖೆ ಬಗ್ಗೆ ಮಾಡಿರುವ ಪ್ರಗತಿ ಪರಿಶೀಲನೆ ಬಗ್ಗೆ ಹೇಳಿದ ಅವರು, ಭೂಗಳ್ಳರ ಮತ್ತು ಅಕ್ರಮ ದಂಧೆಕೋರ ನಿಯಂತ್ರಣಕ್ಕೆ ಸೂಕ್ತಕ್ರಮ ಜರುಗಿಸಲಾಗುವುದೆಂದರು.





