ಯಾದಗಿರಿ | ನ.25ರಂದು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ಯಾದಗಿರಿ: ಮನುವಾದಿ ನಿಲುವು ಹಾಗೂ ಆರ್‌ಎಸ್‌ಎಸ್‌ನ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ನವೆಂಬರ್ 25ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಡಿ.ಜಿ.ಸಾಗರ ಬಣದ ಯಾದಗಿರಿ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಪುತ್ರ ಜವಳಿ, ಭಾರತದ ಸಂವಿಧಾನದ ಮೌಲ್ಯಗಳನ್ನು ಗೌರವಿಸದ, ಐದು ದಶಕಗಳ ಕಾಲ ತಮ್ಮ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಲು ನಿರಾಕರಿಸಿದ ಆರೆಸ್ಸೆಸ್ ವಿರುದ್ಧ ಕಾನೂನು ಕ್ರಮಕ್ಕೆ ಪತ್ರ ನೀಡಿದ್ದಕ್ಕಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆಗಳು ಹೆಚ್ಚುತ್ತಿರುವುದನ್ನು ಖಂಡಿಸಿ ಪ್ರತಿಭಟಿಸಲಾಗುತ್ತಿದೆ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆ ಅವರ ಉತ್ತಮ ರಾಜಕೀಯವನ್ನು ಸಹಿಸದ ಕೆಲವರು ದಲಿತ ಸಮುದಾಯದ ರಾಷ್ಟ್ರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೂ ಅವಹೇಳನ ಮಾಡುತ್ತಿರುವುದು ಖಂಡನೀಯ ಎಂದು ಶಿವಪುತ್ರ ಜವಳಿ ಹೇಳಿದರು.
ಈ ಸಂದರ್ಭದಲ್ಲಿ ಸಂಘಟನಾ ಸಂಚಾಲಕರಾದ ಚಂದಪ್ಪ ಮುನೆಪ್ಪನೋರ, ಶಿವಲಿಂಗ ಹಸನಾಪೂರ, ಮರೆಪ್ಪ ಕ್ರಾಂತಿ, ಶಿವಕುಮಾರ್ ತಳವಾರ ಹಾಗೂ ಖಜಾಂಚಿ ಭೀಮಣ್ಣ ಹುಣಸಗಿ ತಿಪ್ಪಣ್ಣ ಶೆಳ್ಳಗಿ, ಶರಭಣ್ಣ ದೋರನಹಳ್ಳಿ, ತಾಯಪ್ಪ ಭಂಡಾರಿ, ಭೀಮಾಶಂಕರ ಗುಂಡಳ್ಳಿ, ರಂಗಸ್ವಾಮಿ ಕೊಂಕಲ್, ದೊಡ್ಡಪ್ಪ ಕಾಡಂಗೇರಾ, ರಮೇಶ ಬಾಚಿಮಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







