ಯಾದಗಿರಿ | ಒತ್ತಡ ರಹಿತ ಜೀವನ ನಿರ್ವಹಣೆ ಕುರಿತು ವಿಚಾರ ಸಂಕಿರಣ

ಯಾದಗಿರಿ: ಮಾನವ ಜನ್ಮ ಬಲುದೊಡ್ಡದು ಎಂದು ಹಿರಿಯರು ಹೇಳಿದಂತೆಯೇ ನಾವೆಲ್ಲರೂ ಶಾಂತಿ ಮತ್ತು ಪ್ರೀತಿಯಿಂದ ಬದುಕು ಸಾರ್ಥಕ ಮಾಡಿಕೊಳ್ಳಬೇಕೆಂದು ಕಲಬುರಗಿ ಬ್ರಹ್ಮಕುಮಾರಿಸ್ ಈಶ್ವರಿ ವಿವಿಯ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ.ವಿಜಯಾ ದಿದಿ ಹೇಳಿದರು.
ನಗರದ ಡಿಸಿ ಕಚೇರಿಯಲ್ಲಿ ಬುಧವಾರ ಪ್ರಜಾಪಿತ ಬ್ರಹ್ಮಕುಮಾರಿಸ್ ಈಶ್ವರಿ ವಿವಿ ಹಮ್ಮಿಕೊಂಡಿದ್ದ ಒತ್ತಡ ರಹಿತ ಜೀವನ ಕುರಿತಾದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶೇಷವಾಗಿ ಸರಕಾರಿ ಸೇವೆಯಲ್ಲಿ ಇರುವವರು, ವೈದ್ಯರು ಹೆಚ್ಚಿನ ಒತ್ತಡದಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮಾಡುವಂತಹ ಸ್ಥಿತಿ ಇದ್ದು, ಇದು ನಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು. ಅದಕ್ಕಾಗಿ ದೇವರ ಧ್ಯಾನ, ಯೋಗ ಇತ್ಯಾದಿ ಉತ್ತಮ ಆಲೋಚನೆಗಳನ್ನು ರೂಡಿಸಿಕೊಂಡು ಆದಷ್ಟು ಒತ್ತಡ ಮುಕ್ತ ಜೀವನ ನಮ್ಮದಾಗಿಸಿಕೊಳ್ಳಬೇಕೆಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಇಂದಿನ ಒತ್ತಡದ ಜೀವನಕ್ಕೆ ಇಂತಹ ಕಾರ್ಯಕ್ರಮಗಳು, ಅರೋಗ್ಯಪೂರ್ಣ ವಿಚಾರ ಸಂಕಿರಣಗಳ ಅಗತ್ಯವಿದೆ. ಇಂತಹ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಅನೇಕರಿಗೆ ಬಹಳಷ್ಟು ಪ್ರೇರಣೆಯಾಗಿದೆ ಎಂದರು.
ಡಾ.ಕಿಶೋರಿ, ಡಾ.ಮಂಜುನಾಥ ದೊಶೆಟ್ಟಿ ಮಾತನಾಡಿ, ಒತ್ತಡ ರಹಿತ ಜೀವನಕ್ಕೆ ಬೇಕಾದ ಸಲಹೆ, ಸೂಚನೆಗಳನ್ನು ನೀಡಿದರು.
ವಿಚಾರ ಸಂಕಿರಣದಲ್ಲಿ ರಾಜಯೋಗಿನಿ ಬಿ ಕೆ.ಪ್ರೇಮ್ ಅಣ್ಣ ಅವರು ಅಧ್ಯಕ್ಷತೆ ವಹಿಸಿದ್ದರು. ಮೆಡಿಕಲ್ ಕಾಲೇಜ್ ಡಿನ್ ಡಾ.ಸಂದೀಪ್, ಹೆಚ್ಚುವರಿ ಡಿಸಿ ರಮೇಶ ಕೋಲಾರ್, ಡಿಎಚ್ ಒ ಡಾ.ಮಹೇಶ್ ಬಿರಾದಾರ್, ಈಶ್ವರಿ ವಿವಿ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ.ನೀರಾ, ಬಿ.ಕೆ.ನೀಲು ಸೇರಿದಂತೆಯೇ ಇತರರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ನೌಕರರು, ವೈದ್ಯರು, ಸಾರ್ವಜನಿಕರು ಭಾಗವಹಿಸಿದ್ದರು.







