Yadgiri | ಶಾಖಾಪುರ ದಲಿತರ ಮೇಲಿನ ಹಲ್ಲೆ ಪ್ರಕರಣ : ಸೈನಿಕನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಸಿಎಂ, ಗೃಹ ಸಚಿವರಿಗೆ ಸೇನೆಯಿಂದ ಪತ್ರ

ಯಾದಗಿರಿ : ಸುರಪುರ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕೂಡಲೇ ಬಂಧಿಸಿ, ಭಾರತೀಯ ಸೇನೆಯಲ್ಲಿ ಅಗ್ನಿವೀರರಾಗಿ ಸೇವೆ ಸಲ್ಲಿಸುತ್ತಿರುವ ಶಿವಕುಮಾರ್ ತಳವಾರ ಅವರ ಕುಟುಂಬಕ್ಕೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸುವಂತೆ ಮುಖ್ಯಮಂತ್ರಿ, ಗೃಹ ಸಚಿವರು, ಯಾದಗಿರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಭಾರತೀಯ ಸೇನೆಯಿಂದ ಪತ್ರ ಬರೆಯಲಾಗಿದೆ.
ಆ.1ರಂದು ಶಾಖಾಪುರ ಗ್ರಾಮದಲ್ಲಿ ಸತ್ತವರಿಗಾಗಿ ಗುಂಡಿ (ಕುಣಿ) ಅಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ತಳವಾರ ಅವರ ತಾಯಿ, ಮಾವ ಸೇರಿದಂತೆ ದಲಿತ ಸಮುದಾಯದ ಕೆಲವರ ಮೇಲೆ ಹಲ್ಲೆ ನಡೆದಿತ್ತು ಎನ್ನಲಾಗಿದೆ. ಕರ್ತವ್ಯದಲ್ಲಿದ್ದ ಶಿವಕುಮಾರ್ ಅವರು ಈ ಘಟನೆಯನ್ನು ಖಂಡಿಸಿ ಸೆಲ್ಫಿ ವಿಡಿಯೋ ಮೂಲಕ ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು.
17 ಮಂದಿ ವಿರುದ್ಧ ಎಫ್‌ಐಆರ್ :
ಘಟನೆಗೆ ಸಂಬಂಧಿಸಿದಂತೆ ಸುರಪುರ ಪೊಲೀಸ್ ಠಾಣೆಯಲ್ಲಿ 17 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ ಪ್ರಕರಣ ದಾಖಲಾಗಿ ಹಲವು ದಿನಗಳು ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ದಲಿತ ಸಂಘಟನೆಗಳು ಪೊಲೀಸ್ ಇಲಾಖೆಯ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿವೆ.
ಕುಟುಂಬಕ್ಕೆ ರಕ್ಷಣೆ ಕೋರಿದ ಸೇನೆ :
ಶಿವಕುಮಾರ್ ಅವರ ಕುಟುಂಬದ ಮೇಲಿನ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸೇನೆ, ಕುಟುಂಬಕ್ಕೆ ತಕ್ಷಣ ಪೊಲೀಸ್ ರಕ್ಷಣೆ ಒದಗಿಸಿ ಭಯವಿಲ್ಲದೆ ಗ್ರಾಮದಲ್ಲಿ ವಾಸಿಸಲು ಸುರಕ್ಷಿತ ವಾತಾವರಣ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ಸೂಕ್ತ ತನಿಖೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲೇ ಇರದ ಕೆಲವರ ಹೆಸರುಗಳೂ ದೂರಿನಲ್ಲಿ ಸೇರಿಸಿರುವ ಬಗ್ಗೆ ಮಾಹಿತಿ ಇದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿ, ತನಿಖೆಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
-ಪೃಥ್ವಿಕ್ ಶಂಕರ್, ಯಾದಗಿರಿ ಎಸ್ಪಿ
ಇಷ್ಟೆಲ್ಲಾ ಪ್ರತಿಭಟನೆಗಳನ್ನು ನಡೆಸಿದರೂ ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ಇದರಿಂದ ಕಾನೂನಿನ ಮೇಲಿನ ನಮ್ಮ ಭರವಸೆ ಕಡಿಮೆಯಾಗಿದೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ನ್ಯಾಯ ಒದಗಿಸಬೇಕು.
-ಮಲ್ಲಿಕಾರ್ಜುನ ಕ್ರಾಂತಿ, ದಲಿತ ಮುಖಂಡ






