ಯಾದಗಿರಿ | ಹೊಲಗಳಿಗೆ ಹೋಗಿ ಬರಲು ರಸ್ತೆ ಮಾಡಿಕೊಡಲು ಶಿರವಾಳ ಗ್ರಾಮಸ್ಥರಿಂದ ಡಿಸಿಗೆ ಮನವಿ

ಯಾದಗಿರಿ: ಶಹಾಪುರ ತಾಲೂಕಿನ ಶಿರವಾಳ ಗ್ರಾಮದಲ್ಲಿ ನಡೆದಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಹಾಗೂ ರೈಲ್ವೆ ಇಲಾಖೆ ರಸ್ತೆ ನಿರ್ಮಾಣದ ನಡುವೆ ರೈತರು ಅತಿಪುರಾತನದಿಂದಲ್ಲೂ ಬಳಸುತ್ತಿದ್ದ ಸರ್ವೆ ನಂ. 125 ರಿಂದ ಸರ್ವೆ ನಂ. 297 ರ ಮಾರ್ಗದ ರಸ್ತೆಯನ್ನು ಮುಚ್ಚಲಾಗಿದ್ದು, ಇದರಿಂದ ಸಾವಿರಾರು ರೈತರಿಗೆ ಆಗಿರುವ ತೊಂದರೆ ನಿವಾರಣೆಗೆ ಅಲ್ಲಿಯೇ ಒಂದು ಬ್ರಿಡ್ಜ್ ನಿರ್ಮಿಸಿ ಅದರ ಕೆಳಗೆ ಹೊಲಗಳಿಗೆ ಹೋಗಿ ಬರಲು ರಸ್ತೆ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗುರುವಾರ ಡಿಸಿ ಹರ್ಷಲ್ ಭೊಯರ್ ಅವರನ್ನು ಭೇಟಿ ಮಾಡಿದ ಸುಮಾರು ಐವತ್ತು ಹೆಚ್ಚು ರೈತರು ಮಾತನಾಡಿ, ಕಳೆದ ಅನೇಕ ದಿನಗಳಿಂದ ರೈತರು ಕಷ್ಟಕ್ಕೆ ಸಿಲುಕಿದ್ದಾರೆ, ಈ ಬಗ್ಗೆ ಅನೇಕ ಸಲ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಡಿಸಿ ಅವರಿಗೆ ವಿವರಿಸಿದರು.
ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಭೋಯರ್, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಈ ವಿಷಯವನ್ನು ಗಮನಕ್ಕೆ ತಂದರು. ಏನೇ ಇದ್ದರೂ ರೈತರಿಗೆ ತೊಂದರೆಯಾಗಬಾರದು, ಒಂದು ವಾರದಲ್ಲಿ ಈ ಸಮಸ್ಯೆ ಬಗೆಹರಿಸಬೇಕೆಂದು ಹೇಳಿದರು.
ಈ ವೇಳೆ ಗ್ರಾಮದ ಪ್ರಮುಖ ರೈತರಾದ ಮಲ್ಲಿಕಾರ್ಜುನ, ಮಹಿಬೂಬ್, ನಿಂಗಣ್ಣಾ, ಮಕಬುಲ್, ಈರಣ್ಣಾ, ಕಲ್ಲಪ್ಪ, ವೀರಭದ್ರ, ರಾಜಶೇಖರ, ಬಸವರಾಜ, ನಾಗಪ್ಪ ಸೇರಿದಂತೆಯೇ ಇತರರಿದ್ದರು.





