ಯಾದಗಿರಿ | ರಾಜ್ಯ ಸರಕಾರ ದಲಿತರ ಮೇಲಿನ ಹಲ್ಲೆ ತಡೆಯುವಲ್ಲಿ ವಿಫಲವಾಗಿದೆ; ದಲಿತ ಸಂಘಟನೆ ಆರೋಪ

ಸುರಪುರ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬರಲು ರಾಜ್ಯದಲ್ಲಿನ ಎಲ್ಲ ದಲಿತರು ಬೆಂಬಲಿಸಿ ಆರಿಸಿ ತಂದಿದ್ದೇವೆ, ಆದರೆ ರಾಜ್ಯದಲ್ಲಿ ದಲಿತರ ಮೇಲಿನ ಹಲ್ಲೆಯನ್ನು ತಡೆಯುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ದಲಿತ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಳೆದ 28ನೆ ತಾರಿಕು ಗೌಡಗೇರಾ ಗ್ರಾಮದಲ್ಲಿ ದಲಿತರು ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಬ್ಯಾನರ್ ಬಳಿ ಹಾಕಿರುವ ಕಂಬ ಬದಲಾಯಿಸಲು ಮುಂದಾದಾಗ ಅಲ್ಲಿಯ ಕೆಲ ಕಡಿಗೇಡಿಗಳು ಬಂದು ದಲಿತರ ಮೇಲೆ ಹಲ್ಲೆ ಮಾಡುತ್ತಾರೆ, ದಲಿತರು ಪೊಲೀಸ್ ಠಾಣೆಗೆ ಹೋಗಬೇಕಾದರೆ ಬಿಡದೆ ಹಿಂಬಾಲಿಸಿಕೊಂಡು ಬಂದು ತಡೆಯುತ್ತಾರೆ. ಅಲ್ಲದೆ ಪೊಲೀಸ್ ಠಾಣೆಗೆ ಹೋಗಿ ಹಲ್ಲೆ ಮಾಡಿದವರ ವಿರುದ್ಧ ದೂರು ನೀಡಿದರೆ ದೂರು ದಾಖಲಿಸಿಕೊಳ್ಳದೆ ಪೊಲೀಸರು ಹಿಂದೇಟು ಹಾಕುತ್ತಾರೆ. ಇದರಿಂದ ದಲಿತರಿಗೆ ರಾಜ್ಯದಲ್ಲಿ ಕಾನೂನಿನ ರಕ್ಷಣೆ ಇದೆ ಎಂದು ಅನಿಸುತ್ತಿಲ್ಲ, ಇಲ್ಲಿರುವ ಪೊಲೀಸ್ ಅಧಿಕಾರಿಗಳು ದಲಿತರ ಮೇಲಿನ ಹಲ್ಲೆಯನ್ನು ತಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.
ದಲಿತ ಸಂಘಟನೆ ಮುಖಂಡರು ಸಾಮಾಜಿಕ ಜಾಲತಾಣಗಳ ಮೂಲಕ ಘಟನೆಯ ಕುರಿತು ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಇದುವರೆಗೂ ಎಲ್ಲಾ ಆರೋಪಿಗಳನ್ನು ಬಂಧಿಸಿಲ್ಲ. ಇದನ್ನು ದಲಿತ ಸಂಘಟನೆಗಳ ಒಕ್ಕೂಟ ಖಂಡಿಸುತ್ತದೆ ಮತ್ತು ಕೂಡಲೇ ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸುತ್ತೇವೆ. ಅಲ್ಲದೆ ಪ್ರಕರಣದ ತನಿಖೆಯನ್ನು ವಿಶೇಷ ಅಧಿಕಾರಿಗಳನ್ನು ನೇಮಿಸಿ ಮಾಡಿಸಬೇಕು, ಈಗ ನೇಮಿಸಲಾಗಿರುವ ಅಧಿಕಾರಿಗಳಿಂದ ಸರಿಯಾದ ತನಿಖೆ ನಡೆಯುವುದಿಲ್ಲ. ಆದ್ದರಿಂದ ಬೇರೊಬ್ಬ ಅಧಿಕಾರಿಯನ್ನು ನೇಮಿಸಬೇಕು.
ಕಳೆದ ಕೆಲ ದಿನಗಳ ಹಿಂದೆ ಪರಸನಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರೆಯಲ್ಲಿ ರಾಜಾರೋಷವಾಗಿ ಕೋಣ, ಕುರಿಗಳ ಬಲಿ ನೀಡಲಾಗಿದೆ. ಇದನ್ನು ಪೊಲೀಸರ ಗಮನಕ್ಕೆ ತಂದರೆ ಕಾಟಾಚಾರಕ್ಕೆ ಎಂಬಂತೆ ಸುಮೋಟೊ ಕೇಸ್ ದಾಖಲು ಮಾಡಿ ಆರೋಪಿಗಳನ್ನು ಬಂಧಿಸದೆ ಪ್ರಕರಣವನ್ನು ನಿರ್ಲಕ್ಷ್ಯ ತೋರಲಾಗಿದೆ. ಇದೆಲ್ಲವನ್ನು ನೋಡಿದಾಗ ಪೊಲೀಸರ ಕಾರ್ಯವೈಖರಿಯ ಬಗ್ಗೆ ಅನುಮಾನ ಹುಟ್ಟುವಂತಾಗಿದೆ. ಆದ್ದರಿಂದ ಈಗ ಗೌಡಗೇರಾ ಘಟನೆಯ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಇಲ್ಲವಾದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರಾದ ಭೀಮರಾಯ ಸಿಂದಗೇರಿ, ನಿಂಗಣ್ಣ ಗೋನಾಲ, ಶಿವಲಿಂಗ ಹಸನಾಪುರ, ಮರಿಲಿಂಗಪ್ಪ ಗುಡಿಮನಿ,ತಿಪ್ಪಣ್ಣ ಶೆಳ್ಳಗಿ, ಶರಣಪ್ಪ ತಳವಾರಗೇರ, ಮಹಾದೇವ ಚಲುವಾದಿ, ಶೇಖರ ಮಂಗಳೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







