ಯಾದಗಿರಿ | ಮಳೆಗೆ ಕೊಚ್ಚಿಕೊಂಡು ಹೋದ ತಾತ್ಕಾಲಿಕ ಸೇತುವೆ

ಯಾದಗಿರಿ : ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಸುರಿದ ಮಳೆಗೆ ಜಿಲ್ಲೆಯ ಕಲ್ಲದೇವನಹಳ್ಳಿ ಹಳ್ಳ ಭರ್ತಿಯಾಗಿ ಹರಿದ ಪರಿಣಾಮ, ನೀರಿನ ರಭಸಕ್ಕೆ ಕಿರು ಸೇತುವೆ ಕೊಚ್ಚಿಗೊಂಡು ಹೋದ ಘಟನೆ ಗುರುವಾರ ಸಂಭವಿಸಿದೆ.
ಯಾದಗಿರಿ ಜಿಲ್ಲೆಯ (ಹುಣಸಗಿ) ಕಲ್ಲದೇವನಹಳ್ಳಿ ಸಮೀಪದ ಸೇತುವೆ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ರಸ್ತೆ ಸಂಪರ್ಕ ಕಡಿತವಾಗಿದ್ದು, ಹಳ್ಳದ ನೀರಿನ ಪ್ರವಾಹಕ್ಕೆ ತಾತ್ಕಾಲಿಕ ಸೇತುವೆ ಸಂಪೂರ್ಣ ನಾಶವಾಗಿದೆ.
ಜಿಲ್ಲೆಯ ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿ ಸಮೀಪದ ಹಳ್ಳಕ್ಕೆ ಅಡ್ಡಲಾಗಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಇದೀಗ ಭಾರಿ ಮಳೆಗೆ ಕೊಚ್ಚಿಕೊಂಡು ಹೋಗಿದೆ. ಈಗಾಗಲೇ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಜನರ ಅನುಕೂಲಕ್ಕೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಮಳೆಗೆ ನೀರು ಪಾಲಾಗಿದೆ.
ಕಲ್ಲದೇವನಹಳ್ಳಿ ಗ್ರಾಮದಿಂದ ಹುಣಸಗಿ, ಸುರಪುರಕ್ಕೆ ತೆರಳುವ ಸೇತುವೆ ಇದಾಗಿದ್ದು, ಸೇತುವೆ ಕೊಚ್ಚಿಕೊಂಡು ಹೋದ ಹಿನ್ನಲೆ ವಿದ್ಯಾರ್ಥಿಗಳು, ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.
5 ಕಿ.ಮೀ ದೂರದ ವಜ್ಜಲ್ ಮಾರ್ಗವಾಗಿ ಶಾಲೆ, ಕಾಲೇಜ್ ಗೆ ವಿದ್ಯಾರ್ಥಿಗಳ ತೆರಳುವ ಸ್ಥಿತಿ ಉಂಟಾಗಿದೆ. ಕೂಡಲೇ ತಾತ್ಕಾಲಿಕ ಸೇತುವೆ ಎತ್ತರವಾಗಿ ನಿರ್ಮಾಣ ಮಾಡಿ, ಹೊಸ ಸೇತುವೆ ಕಾಮಗಾರಿ ಮಾಡುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.





