ಯಾದಗಿರಿ | ಈ-ಸ್ವತ್ತು ಮಾಡಿ ಕೊಡಲು ಸಾವಿರಾರು ರೂ. ಸುಲಿಗೆ : ಸೇನೆ ಆರೋಪ

ಸುರಪುರ : ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸಾರ್ವಜನಿಕರಿಗೆ ಈ-ಸ್ವತ್ತು ಮಾಡಿ ಕೊಡಲು ಜನರಿಂದ ಹಣ ಸುಲಿಗೆ ಮಾಡಲಾಗುತ್ತಿದೆ ಎಂದು ಜಯಕರ್ನಾಟಕ ರಕ್ಷಣಾ ಸೇನೆ ಮುಖಂಡರು ಆರೋಪಿಸಿದರು.
ನಗರದ ತಾಲೂಕು ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ, ಗ್ರಾಮೀಣ ಜನರು ಎರಡು ನೂರು, ಮೂರು ನೂರು ರೂ.ಗೆ ಕೂಲಿ ಕೆಲಸ ಮಾಡಲು ಹೋಗುತ್ತಾರೆ. ಆದರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕರ ವಸೂಲಿಗಾರರು ಜನರಿಂದ ಒಂದು ಈ-ಸ್ವತ್ತು ಮಾಡಿ ಕೊಡಲು 15 ರಿಂದ 25 ಸಾವಿರ ರೂಪಾಯಿಗಳ ಸುಲಿಗೆ ಮಾಡುತ್ತಿದ್ದಾರೆ.
ಇದರಿಂದ ಗ್ರಾಮೀಣ ಜನರು ಅಧಿಕಾರಿಗಳ ನಡೆಗೆ ತುಂಬಾ ಬೇಸತ್ತು ಹೋಗಿದ್ದಾರೆ. ಆದ್ದರಿಂದ ಕೂಡಲೇ ಈ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳ ಬೇಕು ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಈ-ಸ್ವತ್ತು ಮಾಡಿಕೊಡಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.
ನಂತರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದ ಮನವಿ ಕಚೇರಿ ಸಿರಸ್ತೆದಾರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಮಲ್ಲು ನಾಯಕ ಕಬಾಡಗೇರ, ಜಿಲ್ಲಾ ಕಾರ್ಯಾಧ್ಯಕ್ಷ ಶರಣು ಬೈರಿಮರಡಿ, ತಾಲೂಕು ಕಾರ್ಯಾಧ್ಯಕ್ಷ ಶಿವರಾಜ ವಗ್ಗಾರ, ಕೃಷ್ಣಾ ಹಾವಿನ್, ಹಣಮಂತ ಭಂಡಾರಿ, ಮನೋಹರ ಕಟ್ಟಿಮನಿ, ಶಿವಕುಮಾರ ಗಾಜಲದಿನ್ನಿ, ವಿರೇಶ ರತ್ತಾಳ, ಸಿದ್ದು ತುಮಕೂರು, ಶಿವು ಮುಡ್ಡಾ,ನಾಗಲಿಂಗ ಕರೇಗಾರ, ಪ್ರವೀಣ ವಿಭೂತೆ, ಸಂತೋಷ ನಾಯಕ ಸತ್ಯಂಪೇಟೆ, ಸಿದ್ದು ಮಡಿವಾಳ, ನಾಗರಾಜ ನಂಬಾ, ಚನ್ನಬಸವ ಗುತ್ತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.