ಯಾದಗಿರಿ | ದೂರುದಾರರಿಂದ ಫೋನ್ ಪೇ ಮೂಲಕ ಹಣ ಸ್ವೀಕರಿಸಿದ್ದ ಆರೋಪ : ಇಬ್ಬರು ಪೊಲೀಸರು ಅಮಾನತು

ಸಾಂದರ್ಭಿಕ ಚಿತ್ರ
ಯಾದಗಿರಿ: ದೂರುದಾರರಿಂದ ಹಣ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ರನ್ನು ಎಸ್ ಪಿ ಪ್ರಥ್ವಿಕ್ ಶಂಕರ್ ಅವರು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಗುರುಮಠಕಲ್ ಪೊಲೀಸ್ ಠಾಣೆಯ ಪೊಲೀಸ್ ಪೇದೆಗಳಾದ ವಿಶ್ವನಾಥರಡ್ಡಿ ಮತ್ತು ಗೋಪಾಲರೆಡ್ಡಿ ಅಮಾನತುಗೊಂಡಿದ್ದಾರೆ.
ಘಟನೆ ವಿವರ: ಕಳೆದ ಜೂ.24 ರಂದು ಠಾಣಾ ವ್ಯಾಪ್ತಿಯ ಮಿನಾಸಪುರ ಗ್ರಾಮದ ವೆಂಕಟರಡ್ಡಿ ಮತ್ತು ಅವರ ಮಗ ಹಣಮಂತರಡ್ಡಿ ಎಂಬುವವರ ಮೇಲೆ ಯಾದಯ್ಯ, ಮಲ್ಲಯ್ಯ ಮತ್ತು ಗೋಪಿ ಎಂಬುವವರು ಸೇರಿದಂತೆ ಐವರು ಮಾರಣಾಂತಿಕ ಹಲ್ಲೆ ನಡೆಸಿ ಹಾಗೂ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಅನುಸೂಯಾ ವೆಂಟಕರಡ್ಡಿ ಎಂಬುವವರು ದೂರು ನೀಡಿದ್ದರು.
ಆರೋಪಿಗಳನ್ನು ಬಂಧಿಸುವ ಕುರಿತು ವಿಚಾರಿಸಿದಾಗ ಅವರನ್ನು ಬಂಧಿಸಬೇಕಾದರೆ ಒಂದು ಲಕ್ಷ ರೂ. ನೀಡಬೇಕೆಂಬ ಬೇಡಿಕೆಯನ್ನು ಈ ಇಬ್ಬರು ಪೊಲೀಸರು ಇಟ್ಟಿದ್ದರು.
ಈ ವೇಳೆ ವಿಶ್ವನಾಥರಡ್ಡಿ ಎಂಬುವವರ ಮೊಬೈಲ್ ಗೆ 10 ಸಾವಿರ ರೂ. ಹಾಗೂ ರಾಜೇಂದ್ರಬಾಬು ಎಂಬುವವರ ನಂ.ಗೆ ಹತ್ತು ಸಾವಿರ ರೂ. ಫೋನ್ ಪೇ ಮಾಡಿದ್ದರ ಬಗ್ಗೆ ಎಸ್ ಪಿ ಅವರಿಗೆ ಸಲ್ಲಿಸಿದ್ದ ದೂರಿನಲ್ಲಿ ಅನುಸೂಯ ಎಂಬುವವರು ವಿವರಿಸಿದ್ದರು.
ಈ ದೂರಿನ್ವಯ ತನಿಖೆಗೆ ಆದೇಶಿಸಿದಾಗ ಇದನ್ನು ತನಿಖೆ ಮಾಡಿದ ಡಿವೈಎಸ್ ಪಿ ಸುರೇಶ್ ಅವರು ನೀಡಿದ ವರದಿ ಆಧಾರದ ಮೇಲೆ ಈ ಇಬ್ಬರನ್ನು ಎಸ್ ಪಿ ಅವರು ಸೇವೆಯಿಂದ ಅಮಾನತುಗೊಳಿಸಿದ್ದಾರೆ.







