ಯಾದಗಿರಿ | ಬಲವಂತವಾಗಿ ಸಾಲ ವಸೂಲಿ ಮಾಡದಂತೆ ಶೋಷಿತರ ಒಕ್ಕೂಟ ಆಗ್ರಹ

ಸುರಪುರ : ಗ್ರಾಹಕರಿಂದ ಬಲವಂತದ ಸಾಲ ಮಸೂಲಾತಿ ಮಾಡದಂತೆ ಆಗ್ರಹಿಸಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದಿಂದ ಸುರಪುರ ನಗರದ ರಂಗಂಪೇಟೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆ ಮುಂದೆ ಟೈರ್ ಗೆ ಬೆಂಕಿ ಹಚ್ಚಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಬ್ಯಾಂಕಿನಿಂದ ಬಲವಂತದ ಸಾಲ ವಸೂಲಾತಿ ನಡೆಯುತ್ತಿದ್ದು, ಕೂಡಲೇ ಇದನ್ನು ನಿಲ್ಲಿಸಬೇಕು. ಅರ್ಹ ಫಲಾನುಭವಿಗಳಿಗೆ ಸಾಲ ನೀಡಬೇಕು, ಸಾಲ ಮರುಪಾವತಿ ಮಾಡಿದವರಿಗೆ ಕೂಡಲೇ ಮತ್ತೆ ಸಾಲ ನೀಡಬೇಕು. ಈಗಾಗಲೇ ಸಾಲ ನೀಡಿದ ನಾಲ್ಕು ವರ್ಷದ ಘಟಕಗಳನ್ನು ತನಿಖೆಗೆ ಒಳಪಡಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ, ಎಲ್ಲ ಬೇಡಿಕೆಗಳು ಈಡೇರಿಸದಿದ್ದಲ್ಲಿ ಶಾಖೆಯ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಬ್ಯಾಂಕ್ ಸಿಬ್ಬಂದಿ ಮೂಲಕ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಒಕ್ಕೂಟದ ತಾಲೂಕು ಅಧ್ಯಕ್ಷ ನಾಗರಾಜ ದರಬಾರಿ, ಮುಖಂಡರಾದ ದೇವಪ್ಪ ರತ್ತಾಳ, ಶಿವು ಹಸನಾಪುರ, ಅಂಬರೀಶ ಹಸನಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.





