Yadgiri | ಅರಣ್ಯದಲ್ಲಿ ವನ್ಯಜೀವಿ ಬೇಟೆ ಆರೋಪ : 7 ಮಂದಿಯ ಬಂಧನ
6 ನಾಡಬಂದೂಕು, ನವಿಲಿನ ಮಾಂಸ, ಜೀವಂತ ಆಮೆಗಳು ವಶ

ಯಾದಗಿರಿ: ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಏಳು ಮಂದಿಯನ್ನು ಬಂಧಿಸಿದ್ದು, ಅವರಿಂದ ಆರು ನಾಡಬಂದೂಕುಗಳು, ನವಿಲಿನ ಮಾಂಸ, ಜೀವಂತ ಆಮೆಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಯಾದಗಿರಿ ಪ್ರಾದೇಶಿಕ ಅರಣ್ಯ ವಲಯದ ಅರಕೇರಾ (ಕೆ) ಶಾಖೆಯ ಮೋಟ್ನಳ್ಳಿ ಗಸ್ತಿನ ಬಗ್ಗಲುಮಡು ಸೆಕ್ಷನ್-4ರ ಸರ್ವೇ ನಂ.30ರ ಅರಣ್ಯ ಪ್ರದೇಶದಲ್ಲಿ ಸೆಪ್ಟೆಂಬರ್ 11ರ ರಾತ್ರಿ ಈ ಕಾರ್ಯಾಚರಣೆ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ರಾತ್ರಿ ಗಸ್ತು ನಡೆಸುತ್ತಿದ್ದ ವೇಳೆ ಅರಣ್ಯ ಪ್ರದೇಶದಲ್ಲಿ ಜನರ ಗುಂಪಿನ ಶಬ್ದ ಕೇಳಿಬಂದಿದ್ದು, ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಏಳು ಮಂದಿ ವನ್ಯಜೀವಿ ಬೇಟೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ.
ವಿಚಾರಣೆ ವೇಳೆ ಆರೋಪಿಗಳು ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳನ್ನು ಬೇಟೆಯಾಡಿರುವುದಾಗಿ ತಿಳಿಸಿದ್ದು, ಸ್ಥಳದಲ್ಲಿ ಎರಡು ನವಿಲುಗಳನ್ನು ಬೇಟೆಯಾಡಿ ಸುಟ್ಟಿರುವುದು ಹಾಗೂ ಅವುಗಳ ಮಾಂಸ ಪತ್ತೆಯಾಗಿದೆ. ಅಲ್ಲದೆ ಎರಡು ಜೀವಂತ ಆಮೆಗಳು ಮತ್ತು 12 ಜೀವಂತ ಏಡಿಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ವಸ್ತುಗಳು :
ಕಾರ್ಯಾಚರಣೆಯಲ್ಲಿ 2 ನವಿಲಿನ ಮಾಂಸ, 12 ಜೀವಂತ ಏಡಿಗಳು, 2 ಜೀವಂತ ಆಮೆಗಳು, 6 ನಾಡಬಂದೂಕುಗಳು, ಗನ್‌ಪೌಡರ್‌ಗೆ ಸಂಬಂಧಿಸಿದ ವಸ್ತುಗಳು, 2 ಟಾರ್ಚ್‌ಗಳು, 1 ಕೊಡಲಿ, ಮಾಂಸ ಬೇಯಿಸಲು ಬಳಸಿದ ಮಣ್ಣಿನ ಮಡಿಕೆ, ಸ್ಟೀಲ್ ತಟ್ಟೆ ಹಾಗೂ 7 ಮೊಬೈಲ್ ಫೋನ್‌ಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ.
ಚಿತ್ತಾಪುರ ಮೂಲದ ಆರೋಪಿಗಳು :
ಬಂಧಿತರನ್ನು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಬೀಮನಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ನಿವಾಸಿಗಳಾದ ನಿಂಗಪ್ಪ, ವಾಸುದೇವ, ಕರೇಪ್ಪ, ಕಾಂತಪ್ಪ, ಯಲ್ಲಲಿಂಗ, ಬಸವರಾಜ ಹಾಗೂ ಮಲ್ಲಪ್ಪ ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರೂ ಕೂಲಿ ಕಾರ್ಮಿಕರು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ–1972, ಕರ್ನಾಟಕ ಅರಣ್ಯ ಕಾಯ್ದೆ ಹಾಗೂ ಆಯುಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಲಯ ಅರಣ್ಯಾಧಿಕಾರಿ ಬುರಾನುದ್ದೀನ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಹಂದ್ರಾಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.






