ಯಾದಗಿರಿ | ಕಸಾಪದಿಂದ 110ನೇ ಸಂಸ್ಥಾಪನಾ ದಿನಾಚರಣೆ
ಕನ್ನಡ ಉಳಿಸಿ ಬೆಳೆಸುವ ಕೆಲಸ ಎಲ್ಲರೂ ಮಾಡೋಣ : ಜಾಲವಾದಿ

ಸುರಪುರ: ನಾಲ್ವಡಿ ಕೃಷ್ಣರಾಜ ಒಡೆಯರ್ ಅಂತಹ ಮಹನೀಯರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಕನ್ನಡವನ್ನು ಕಟ್ಟುವ ಆಲೋಚನೆಯಿಂದ ಕನ್ನಡ ಸಾಹಿತ್ಯ ಪರಿಷತ್ತನ್ನು ಹುಟ್ಟು ಹಾಕಿದ್ದಾರೆ. ಅವರ ಕಾರ್ಯವನ್ನು ಆದರ್ಶವಾಗಿ ಇಟ್ಟುಕೊಂಡು ಎಲ್ಲರೂ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡೋಣ ಎಂದು ಕಸಾಪ ನಿಕಟ ಪೂರ್ವ ತಾಲೂಕ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ಗರುಡಾದ್ರಿ ಕಲಾಮಂದಿರದ ರಿಕ್ರಿಯೇಶನ್ ಕ್ಲಬ್ ಆವರಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹುಟ್ಟು ಹಾಕಿದಂತ ಕನ್ನಡ ಸಾಹಿತ್ಯ ಪರಿಷತ್ತು ಇಂದು ಹೆಮ್ಮರವಾಗಿ ಬೆಳೆದಿದೆ. ಕರ್ನಾಟಕ ಮಾತ್ರವಲ್ಲದೆ ಅನೇಕ ಕಡೆಗಳಲ್ಲಿಯೂ ಇದರ ಶಾಖೆಗಳನ್ನು ಕಾಣುತ್ತೇವೆ, ಆದರೆ ಇಂದು ಕನ್ನಡವನ್ನು ಗ್ರಾಮೀಣ ಭಾಗದಲ್ಲಿ ಹೆಚ್ಚು ಉಳಿಸುವಂಥ ಕಾರ್ಯ ನಡೆಯುತ್ತಿದ್ದು, ಬೆಂಗಳೂರಿನಂತ ದೊಡ್ಡ ದೊಡ್ಡ ನಗರಗಳಲ್ಲಿ ಕನ್ನಡ ದಿನೇ ದಿನೇ ಮರೆಯಾಗುತ್ತಿರುವುದು ದುರಂತದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣಬಸಪ್ಪ ಯಾಳವಾರ ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜನದರಖಾನಿ, ವಕೀಲ ಯಲ್ಲಪ್ಪ ಹುಲಿಕಲ್, ಉಪನ್ಯಾಸಕ ಗಂಗಾಧರ ರುಮಾಲು, ಶಿಕ್ಷಕ ಶ್ರೀಶೈಲ ಯಂಕಂಚಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಹಿತ್ಯ ಪ್ರೇಮಿಗಳಾದ ರಮೇಶ ಕುಲಕರ್ಣಿ, ವಕೀಲ ನಾಗರಡ್ಡಿ, ಪ್ರೇಮ್ ಹುಲಿಕಲ್, ರಾಘವೇಂದ್ರ ಭಕ್ರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಕಸಾಪ ಗೌರವ ಕಾರ್ಯದರ್ಶಿ ಹೆಚ್.ರಾಠೋಡ ಸ್ವಾಗತಿಸಿ, ನಿರೂಪಿಸಿದರು, ಉಪನ್ಯಾಸಕ ವೆಂಕಟೇಶ ಗೌಡ ವಂದಿಸಿದರು.







