Yadgiri | ಗುತ್ತಿಗೆದಾರನಿಗೆ 1.90 ಕೋಟಿ ರೂ. ಬಿಲ್ ಬಾಕಿ: ಲೋಕೋಪಯೋಗಿ ಇಲಾಖೆ ಕಚೇರಿ ಸಾಮಾನುಗಳು ಜಪ್ತಿ

ಯಾದಗಿರಿ: ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಇಲ್ಲಿನ ಲೋಕೋಪಯೋಗಿ ಇಲಾಖೆ ಕಚೇರಿಯ ಕಂಪ್ಯೂಟರ್, ಎಸಿ, ಟೇಬಲ್, ಕುರ್ಚಿ ಸೇರಿದಂತೆ ಇತರ ಸಾಮಾನುಗಳನ್ನು ಜಿಲ್ಲಾ ನ್ಯಾಯಾಲಯದ ಸಿಬ್ಬಂದಿ ಗುರುವಾರ ಜಪ್ತಿ ಮಾಡಿಕೊಂಡ ಘಟನೆ ನಡೆದಿದೆ.
ಇತ್ತೀಚೆಗಷ್ಟೇ ಸಂತ್ರಸ್ತೆಯೊಬ್ಬರಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ನಗರಸಭೆ ಕಚೇರಿ ಸಾಮಾನುಗಳನ್ನು ಕೋರ್ಟ್ ಜಪ್ತಿ ಮಾಡಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ಜಪ್ತಿ ಪ್ರಕರಣ ನಡೆದಿರುವುದು ಸಾರ್ವಜನಿಕ ಹಾಗೂ ಸರ್ಕಾರಿ ವಲಯದಲ್ಲಿ ಗಮನ ಸೆಳೆದಿದೆ.
ಗುತ್ತಿಗೆದಾರ ಎಸ್.ಎಸ್. ಪೊಲೀಸ್ ಪಾಟೀಲ್ ಅವರಿಗೆ ಸಂದಾಯವಾಗಬೇಕಿದ್ದ ಸುಮಾರು 1.90 ಕೋಟಿ ರೂ. ಬಾಕಿ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಪರಿಹಾರ ನೀಡುವಂತೆ ಆದೇಶಿಸಿತ್ತು. ಆದರೂ ಬಾಕಿ ಪಾವತಿಯಾಗದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಕಚೇರಿಯ ಸಾಮಾನುಗಳನ್ನು ಜಪ್ತಿ ಮಾಡುವಂತೆ ಆದೇಶ ನೀಡಲಾಗಿತ್ತು.
ಗುರುವಾರ ಬೆಳಗ್ಗೆ ಸುಮಾರು 11 ಗಂಟೆಗೆ ಕಚೇರಿಗೆ ಆಗಮಿಸಿದ ನ್ಯಾಯಾಲಯದ ಸಿಬ್ಬಂದಿ, ಜಪ್ತಿ ಆದೇಶದ ಪ್ರತಿಯನ್ನು ಅಧಿಕಾರಿಗಳಿಗೆ ತೋರಿಸಿ ಸಾಮಾನುಗಳನ್ನು ಜಪ್ತಿ ಮಾಡುವುದಾಗಿ ತಿಳಿಸಿದರು. ಸಂಬಂಧಪಟ್ಟ ಹಿರಿಯ ಎಂಜಿನಿಯರ್ ಬರುವವರೆಗೆ ಕೆಲಕಾಲ ಕಾದ ಬಳಿಕ ವಾಹನ ತರಿಸಿ ಕಚೇರಿಯಲ್ಲಿದ್ದ ಕಂಪ್ಯೂಟರ್‌ಗಳು, ಎಸಿ, ಟೇಬಲ್‌ಗಳು, ಕುರ್ಚಿಗಳು ಸೇರಿದಂತೆ ಇತರ ಬೆಲೆಬಾಳುವ ಸಾಮಾನುಗಳನ್ನು ಜಪ್ತಿ ಮಾಡಿಕೊಂಡು ತೆರಳಿದರು.
ಘಟನೆ ಹಿನ್ನೆಲೆ :
ಯಾದಗಿರಿ ಜಿಲ್ಲಾ ಕೇಂದ್ರವಾಗಿ ಘೋಷಣೆಯಾದ ನಂತರ 2016–17ನೇ ಸಾಲಿನಲ್ಲಿ ನಗರಾಭಿವೃದ್ಧಿ ಇಲಾಖೆಯ ವತಿಯಿಂದ ಡಾ. ಅಂಬೇಡ್ಕರ್ ವೃತ್ತದಿಂದ ಸೇಡಂ ರಸ್ತೆಯ ಹತ್ತಿಕುಣಿ ಕ್ರಾಸ್‌ವರೆಗೆ ರಸ್ತೆ ಕಾಮಗಾರಿ ಕೈಗೊಳ್ಳಲು ಲೋಕೋಪಯೋಗಿ ಇಲಾಖೆ ಟೆಂಡರ್ ಕರೆದಿತ್ತು.
ಈ ಕಾಮಗಾರಿಯನ್ನು ಪಡೆದಿದ್ದ ಗುತ್ತಿಗೆದಾರ ಎಸ್.ಎಸ್. ಪೊಲೀಸ್ ಪಾಟೀಲ್ ಅವರು ಕಾಮಗಾರಿ ಪೂರ್ಣಗೊಳಿಸಿದ್ದರು. ಆದರೆ ತಮಗೆ ಬರಬೇಕಿದ್ದ ಸುಮಾರು 1.90 ಕೋಟಿ ರೂ. ಬಾಕಿ ಹಣವನ್ನು ಪಾವತಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರು. ನಗರಾಭಿವೃದ್ಧಿ ಇಲಾಖೆ ಬಾಕಿ ಬಿಲ್ ಚುಕ್ತಾ ಮಾಡದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣ ಪರಿಶೀಲಿಸಿದ ನ್ಯಾಯಾಲಯ ಬಾಕಿ ಹಣ ಪಾವತಿಸುವಂತೆ ಆದೇಶಿಸಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಕೊನೆಗೆ ಲೋಕೋಪಯೋಗಿ ಇಲಾಖೆ ಕಚೇರಿಯ ಸಾಮಾನುಗಳ ಜಪ್ತಿಗೆ ಆದೇಶ ನೀಡಲಾಗಿತ್ತು ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸುವಂತೆ ಈ ಹಿಂದಿನ ಜಿಲ್ಲಾಧಿಕಾರಿ ಹರ್ಷಲ್ ಬೊಯರ್ ಅವರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಈ ಕಡತ ಇದೀಗ ಹಣಕಾಸು ಇಲಾಖೆಯಲ್ಲಿದ್ದು, ಕೆಲವು ಅಗತ್ಯ ಮಾಹಿತಿಗಳನ್ನು ಕೇಳಲಾಗಿದೆ. ಶೀಘ್ರದಲ್ಲೇ ಬಿಲ್ ಪಾವತಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ನಡೆದ ಜಪ್ತಿ ಕಾರ್ಯ ಹಾಗೂ ಮುಂದಿನ ಕ್ರಮಗಳ ಕುರಿತು ಇಲಾಖೆ ಕಾನೂನು ಸಲಹೆಗಾರರೊಂದಿಗೆ ಶುಕ್ರವಾರ ಚರ್ಚಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಎಇ ಎಸ್.ಜಿ. ಪಾಟೀಲ್ ತಿಳಿಸಿದ್ದಾರೆ.
ಸುಮಾರು 1.90 ಕೋಟಿ ರೂ. ಬಾಕಿ ಉಳಿಯಲು ಕಾರಣವೇನು ಹಾಗೂ ನ್ಯಾಯಾಲಯದ ಆದೇಶದ ಸಂಪೂರ್ಣ ವಿವರವೇನು ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.






