ಯಾದಗಿರಿ | ದಲಿತರ ಕೇರಿಗೆ ನಿರ್ಮಾಣವಾಗುತ್ತಿರುವ ಸಿಸಿ ರಸ್ತೆ ಕಾಮಾಗಾರಿಗೆ ಕುರುಬ ಸಮಾಜದವರಿಂದ ತಡೆ : ಅಶೋಕ್ ಹೋಸ್ಮನಿ ಆರೋಪ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ದಲಿತರ ಕೇರಿಗೆ ನಿರ್ಮಾಣವಾಗುತ್ತಿರುವ ಸಿಸಿ ರಸ್ತೆ ಕಾಮಾಗಾರಿಗೆ ಕುರುಬ ಸಮಾಜದವರಿಂದ ಉದ್ದೇಶಪೂರ್ವಕವಾಗಿ ತಡೆಹಿಡಿಯಲಾಗಿದೆ ಎಂದು ದಲಿತ ಸೇನೆ ಯಾದಗಿರಿ ಜಿಲ್ಲಾಧ್ಯಕ್ಷ ಅಶೋಕ್ ಹೋಸ್ಮನಿ ಅವರು ಆರೋಪಿಸಿದ್ದಾರೆ.
ಯಾವುದೇ ಕಾರಣಕ್ಕೂ ನಿಮ್ಮ ʼಹೊಲೆಯʼ ನಗರಕ್ಕೆ ಮಾರ್ಗ ಮಾಡುವಂತಿಲ್ಲ. ಸಿಸಿ ರಸ್ತೆ ನಿರ್ಮಾಣ ಮಾಡಬಾರದು, ನಿಮ್ಮ ಜಾತಿಯವರು ಮುಖ್ಯ ರಸ್ತೆಗೆ ಬಾರಬಾರದೆಂದು ಜಾತಿ ನಿಂದನೆ ಮತ್ತು ಬೆದರಿಕೆಯೊಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನಮಗೆ ಸ್ವಾತಂತ್ರ ಬಂದು 7ದಶಗಳು ಕಳೆದರೂ ಶಹಾಪುರ ತಾಲೂಕಿನ ವಿಭೂತಿಹಳ್ಳಿ ದಲಿತರಿಗೆ ಇನ್ನು ಸ್ವಾತಂತ್ರ ಸಿಕ್ಕಿಲ್ಲ. ದಲಿತರು ತಮ್ಮ ಮನೆಗಳಿಗೆ ಹೋಗಲು ದಾರಿ ಮಾಡಿಕೊಳ್ಳಲು ಸರಕಾರಿ ಗೈರಾಣಿ ಜಮೀನಿನಲ್ಲಿ ರಸ್ತೆ ಮಾಡಿಕೊಂಡರೆ, ಅಲ್ಲಿನ ಸವರ್ಣಿಯರು ಯಾವುದೇ ಕಾರಣಕ್ಕೂ ನಾವು ಬಿಡುವುದಿಲ್ಲವೆಂದು ಕಾಮಗಾರಿ ಬಂದ್ ಮಾಡಿ, ಅಡ್ಡ ಕಲ್ಲು ಗೋಡೆ ಕಟ್ಟಿದ್ಧಾರೆ ಎಂದು ಹೇಳಿದರು.
ಘಟನಾ ಸ್ಥಳಕ್ಕೆ ಶಹಪುರ್ ಸರ್ಕಲ್ ಇನ್ ಸ್ಪೆಕ್ಟರ್ ಎಸ್.ಎಂ.ಪಾಟೀಲ್ ಅವರು ಭೇಟಿ ನೀಡಿದಾಗ ಅವರ ಬಳಿ ನಾವು ಯಾವುದೇ ಕಾರಣಕ್ಕೂ ರಸ್ತೆ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಾರೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದರು.
ಅಹಿಂದ ನಾಯಕರು ಎಂದು ಹೇಳಿಕೊಂಡು ಮಾತನಾಡುವ ನಾಯಕರೇ ಹೋಗಿ ಹೇಳಿ ನಿಮ್ಮ ಸಮಾಜದವರಿಗೆ ನಾವೆಲ್ಲ ಸರಿಸಮಾನರು ಎಂದು, ಕಾನೂನು ಸುವೆವಸ್ಥೆ ಕಾಪಾಡುವ ಹೊಣೆಗಾರಿಕೆ ನಿಮ್ಮದಾಗಬೇಕು. ಯಾವುದೇ ಒತ್ತಡಕ್ಕೆ ಮಣಿಯದೇ ಈ ರಸ್ತೆ ಕಾಮಗಾರಿಕೆ ಅನುವು ಮಾಡಿಕಾಡಬೇಕಾದದ್ದು ತಾಲೂಕು ಆಡಳಿತದ ಆದ್ಯ ಕರ್ತವ್ಯ. ಮುಂದೆ ಯಾವುದೆ ಅಹಿತಕರ ಘಟನೆ ಸಂಭವಿಸಿದಲ್ಲಿ ಇಡೀ ಜಿಲ್ಲೆಯ ದಲಿತ ಸಮಾಜದ ಹೋರಾಟ ಮಾಡುವ ಅನಿವಾರ್ಯತೆ ಉಂಟಾಗುತ್ತದೆ ಎಂದು ಎಚ್ಚರಿಕೆ ನೀಡಿದರು.







