Yadgiri | ಪಂಪ್‌ಸೆಟ್‌ಗಳಿಗೆ ನಿರಂತರ 7 ಗಂಟೆ ವಿದ್ಯುತ್ ನೀಡಿ; ಜೆಸ್ಕಾಂ ಅಧ್ಯಕ್ಷರಿಗೆ ರಾಚಣ್ಣಗೌಡ ಮುದ್ನಾಳ ಮನವಿ

ಯಾದಗಿರಿ : ಮುಂಗಾರು ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಪಂಪ್‌ಸೆಟ್‌ಗಳಿಗೆ ನಿರಂತರ 7 ಗಂಟೆಗಳ ವಿದ್ಯುತ್ ಪೂರೈಕೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ನೇತೃತ್ವದ ನಿಯೋಗವು ಶನಿವಾರ ಕಲಬುರಗಿಯಲ್ಲಿ ಜೆಸ್ಕಾಂ ಅಧ್ಯಕ್ಷ ಪ್ರವೀಣಕುಮಾರ ಪಾಟೀಲ್ ಹರವಾಳ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಮುದ್ನಾಳ, ಈ ಬಾರಿ ಸಮರ್ಪಕ ಮಳೆಯಾಗದ ಕಾರಣ ಜಿಲ್ಲೆಯ ಹಲವು ಭಾಗಗಳಲ್ಲಿ ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ. ಅಂತರ್ಜಲ ಲಭ್ಯವಿದ್ದರೂ ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆಯಾಗದ ಕಾರಣ ರೈತರು ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಕಷ್ಟಪಟ್ಟು ಬಿತ್ತನೆ ಮಾಡಿದ ಬೆಳೆ ಕಣ್ಣೆದುರೇ ಒಣಗುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದರು.
ಸರ್ಕಾರದ ನಿಯಮದಂತೆ ರೈತರಿಗೆ ದಿನಕ್ಕೆ ಏಳು ಗಂಟೆಗಳ ವಿದ್ಯುತ್ ಪೂರೈಕೆ ಮಾಡಬೇಕಿದ್ದರೂ, ಯಾದಗಿರಿ ಜಿಲ್ಲೆಯಲ್ಲಿ ಕೇವಲ ಒಂದೆರಡು ಗಂಟೆಗಳ ಕಾಲ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ರಾತ್ರಿ ವೇಳೆಯಲ್ಲಿ ಅನಿಯಮಿತವಾಗಿ ವಿದ್ಯುತ್ ಬಂದು ಹೋಗುತ್ತಿರುವುದರಿಂದ ಪಂಪ್‌ಸೆಟ್‌ಗಳು ಹಾಳಾಗುತ್ತಿದ್ದು, ರೈತರು ಹೊಲದಲ್ಲೇ ರಾತ್ರಿಯಿಡೀ ಕಾಯುವ ಪರಿಸ್ಥಿತಿ ಎದುರಾಗಿದೆ ಎಂದು ದೂರಿದರು.
ಯಾದಗಿರಿ ವಿಧಾನಸಭಾ ಕ್ಷೇತ್ರದ ಭೀಮಾ ಹಾಗೂ ಕೃಷ್ಣಾ ನದಿ ಪಾತ್ರದ ಗ್ರಾಮೀಣ ಪ್ರದೇಶಗಳ ರೈತರು ಮತ್ತು ಕೊಳವೆಬಾವಿಗಳನ್ನು ಅವಲಂಬಿಸಿರುವ ರೈತರು ಈ ಸಮಸ್ಯೆಯಿಂದ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಸಾಲ ಮಾಡಿ ಬಿತ್ತನೆ ಮಾಡಿರುವ ರೈತರಿಗೆ ಬೆಳೆ ಕೈಕೊಟ್ಟರೆ ಆರ್ಥಿಕ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ. ಆದ್ದರಿಂದ ಜಿಲ್ಲೆಯ ಪಂಪ್‌ಸೆಟ್ ಅವಲಂಬಿತ ರೈತರಿಗೆ ನಿರಂತರ ಏಳು ಗಂಟೆಗಳ ವಿದ್ಯುತ್ ಪೂರೈಕೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಮನವಿಗೆ ಸ್ಪಂದಿಸಿದ ಜೆಸ್ಕಾಂ ಅಧ್ಯಕ್ಷ ಪ್ರವೀಣಕುಮಾರ ಪಾಟೀಲ್ ಹರವಾಳ, ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಸುರೇಶ ರಾಠೋಡ್, ಶಂಕರ ಸೋನಾರ, ವಿರುಪಾಕ್ಷಯ್ಯ ಸ್ವಾಮಿ, ಹಣಮಂತ ವಲ್ಲಾಪುರ, ಮಲ್ಲು ರಾಮಸಮುದ್ರ, ಶರಣಗೌಡ ಕಾಳಬೆಳಗುಂದಿ, ಅನೀಲ ಕರಾಟೆ, ಶಿವರಾಜ ದಾಸನಕೇರಿ, ವಕೀಲ ಶರಣಗೌಡ ಅಲಿಪುರ, ರಮೇಶ ಕೊಟೆಮನಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಮತ್ತು ರೈತರು ಉಪಸ್ಥಿತರಿದ್ದರು.






