Yadgiri | ಪಿಎಂ ಜೀವನಜ್ಯೋತಿ ಭೀಮಾ ಯೋಜನೆಯಡಿ ಮೃತಪಟ್ಟ ಗ್ರಾಹಕರ ವಾರಸುದಾರರಿಗೆ ವಿಮಾ ಪರಿಹಾರ ಚೆಕ್‌ಗಳ ವಿತರಣೆ

ಯಾದಗಿರಿ: ತಾಲೂಕಿನ ಹತ್ತಿಕುಣಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದ ಹಾಗೂ ಪ್ರಧಾನಮಂತ್ರಿ ಜೀವನಜ್ಯೋತಿ ಭೀಮಾ ಯೋಜನೆ (ಪಿಎಂಜೆಜೆವೈ) ಅಡಿಯಲ್ಲಿ ವಿಮಾ ಕಂತು ಪಾವತಿಸಿದ್ದ ಸ್ವಾಭಾವಿಕವಾಗಿ ಮೃತಪಟ್ಟ ಇಬ್ಬರು ಗ್ರಾಹಕರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಚೆಕ್ ವಿತರಿಸಲಾಯಿತು.
ಹತ್ತಿಕುಣಿ ಗ್ರಾಮದ ಸಾಬಣ್ಣ ಗಣಪೂರ ಹಾಗೂ ಹೊನಗೇರಾ ಗ್ರಾಮದ ಲಕ್ಷ್ಮಿ ರಾಮಪ್ಪನೋರ ಅವರ ಕುಟುಂಬಸ್ಥರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶರಣಪ್ಪಗೌಡ ಮಾಲಿ ಪಾಟೀಲ್ ಮತ್ತು ಬ್ಯಾಂಕ್ ವ್ಯವಸ್ಥಾಪಕಿ ರೇಣುಕಾ ಗಂಧಮ್ ಚೆಕ್‌ಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶರಣಪ್ಪಗೌಡ ಮಾಲಿ ಪಾಟೀಲ್, ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಜೀವನಜ್ಯೋತಿ ಭೀಮಾ ಯೋಜನೆಯಡಿ ಪ್ರತಿ ವರ್ಷ ಅಲ್ಪ ಮೊತ್ತದ ವಿಮಾ ಕಂತು ಪಾವತಿಸಿದರೆ, ಆಕಸ್ಮಿಕ ಅಥವಾ ಸ್ವಾಭಾವಿಕ ಮರಣ ಸಂಭವಿಸಿದ ಸಂದರ್ಭದಲ್ಲಿ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ದೊರೆಯುತ್ತದೆ ಎಂದು ತಿಳಿಸಿದರು.
ಪರಿಹಾರದ ಹಣವನ್ನು ದುಂದುವೆಚ್ಚ ಮಾಡದೆ ಮಕ್ಕಳ ಶಿಕ್ಷಣ ಮತ್ತು ಕುಟುಂಬದ ಭವಿಷ್ಯಕ್ಕಾಗಿ ಬಳಸಿಕೊಳ್ಳುವಂತೆ ಫಲಾನುಭವಿಗಳ ಕುಟುಂಬಗಳಿಗೆ ಅವರು ಸಲಹೆ ನೀಡಿದರು.
ಬ್ಯಾಂಕ್ ವ್ಯವಸ್ಥಾಪಕಿ ರೇಣುಕಾ ಗಂಧಮ್ ಮಾತನಾಡಿ, ಪಿಎಂಜೆಜೆವೈ ಯೋಜನೆಯ ಪ್ರಯೋಜನಗಳ ಬಗ್ಗೆ ಬ್ಯಾಂಕ್‌ನ ಎಲ್ಲ ಗ್ರಾಹಕರಿಗೂ ಜಾಗೃತಿ ಮೂಡಿಸಲಾಗುತ್ತಿದೆ. ಹೆಚ್ಚಿನ ಗ್ರಾಹಕರು ಯೋಜನೆಗೆ ನೋಂದಾಯಿಸಿಕೊಂಡು ವಾರ್ಷಿಕ ವಿಮಾ ಕಂತು ಪಾವತಿಸುವ ಮೂಲಕ ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ಭದ್ರತೆ ಪಡೆಯಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕರಾದ ಮಧುಶಂಕರ ನಾಯ್ಡು, ಖಜಾಂಚಿ ಪರಶುರಾಮ, ಸಿಬ್ಬಂಧಿಗಳಾದ ಬಸವರಾಜ ಕೌಳೂರ, ಪೃಥ್ವಿರಾಜ ಹೊನಗೇರಾ, ಚಂದ್ರಲಿಂಗ ಮುರಾರಿ, ಶರಣಪ್ಪ ಶಂಕ್ರಪ್ಪನೋರ ಸೇರಿದಂತೆ ಹಲವರು ಉಪಸ್ಥಿತರಿದ್ದರು.






