Yadgiri | ಸನ್ನತಿ ಬ್ರಿಡ್ಜ್ ಕಮ್ ಬ್ಯಾರೇಜ್ ಮುಳುಗಡೆ ರೈತರಿಗೆ ಪರಿಹಾರ ನೀಡಿ: ಹಣಮಂತ್ರಾಯಗೌಡ ಪರಸನಹಳ್ಳಿ
ಅ.27ರಂದು ರಸ್ತೆ ತಡೆದು ಪ್ರತಿಭಟನೆ: ಎಚ್ಚರಿಕೆ

ಯಾದಗಿರಿ : ಶಹಾಪುರ ತಾಲ್ಲೂಕಿನ ಸನ್ನತಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣದಿಂದ ಜಮೀನು ಕಳೆದುಕೊಂಡ ರೈತರಿಗೆ 13 ವರ್ಷ ಕಳೆದರೂ ಸಮರ್ಪಕ ಪರಿಹಾರ ದೊರೆತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಯಾದಗಿರಿ ಜಿಲ್ಲಾಧ್ಯಕ್ಷ ಹಣಮಂತ್ರಾಯಗೌಡ ಪರಸನಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸನ್ನತಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣದಿಂದ ಶಹಾಪುರ ತಾಲ್ಲೂಕಿನ ಸಿರಿವಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರ ಜಮೀನುಗಳು ಮುಳುಗಡೆಯಾಗಿವೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಕೊಲ್ಲೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ರೈತರೂ ಜಮೀನು ಕಳೆದುಕೊಂಡಿದ್ದಾರೆ. ಆದರೆ ಇಷ್ಟು ವರ್ಷ ಕಳೆದರೂ ರೈತರ ಖಾತೆಗಳಿಗೆ ಪರಿಹಾರದ ಹಣ ಜಮೆಯಾಗಿಲ್ಲ ಎಂದು ದೂರಿದರು.
ಕೆಲವು ರೈತರಿಗೆ ಜಿಲ್ಲಾ ನ್ಯಾಯಾಲಯದ ಮೂಲಕ 80 ಲಕ್ಷ ರೂ. ನಿಂದ 90 ಲಕ್ಷ ರೂ. ವರೆಗೆ ಪರಿಹಾರ ನೀಡುವಂತೆ ಆದೇಶವಾಗಿದ್ದರೂ, ಹಣ ಕೈಗೆ ಬಂದಿಲ್ಲ. ನಮಗೆ 80–90 ಲಕ್ಷ ರೂ. ವೇ ಬೇಕೆಂದಿಲ್ಲ. ಬಾಗಲಕೋಟೆಯ ಆಲಮಟ್ಟಿ ಜಲಾಶಯದಿಂದ ಮುಳುಗಡೆಯಾದ ರೈತರಿಗೆ ನೀಡಿದ ರೀತಿಯಲ್ಲಿ 40 ಲಕ್ಷ ರೂ. ನಿಂದ 45 ಲಕ್ಷರೂ. ವರೆಗೆ ಪರಿಹಾರ ನೀಡಿದರೂ ಸಾಕು. ನಮ್ಮ ಜಮೀನಿನ ಮೌಲ್ಯ ನಮಗೆ ಗೊತ್ತಿದೆ. ಜಮೀನನ್ನೂ ಕಳೆದುಕೊಂಡು, ಪರಿಹಾರವೂ ಸಿಗದೆ ಬದುಕುವುದು ಹೇಗೆ ಎಂದು ಅವರು ಪ್ರಶ್ನಿಸಿದರು.
ಈ ಸಂಬಂಧ 15 ದಿನಗಳ ಹಿಂದೆ ಬಾಗಲಕೋಟೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ವಿಚಾರಣೆ ನಡೆಸಿದಾಗ, 15 ದಿನಗಳಲ್ಲಿ ಉತ್ತರ ನೀಡುವುದಾಗಿ ತಿಳಿಸಿದ್ದರು. ಆದರೆ ಇದುವರೆಗೂ ಯಾವುದೇ ಉತ್ತರ ಬಂದಿಲ್ಲ. ಜಮೀನು ಕಳೆದುಕೊಂಡ ರೈತರು ಜೀವನೋಪಾಯಕ್ಕಾಗಿ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಲ್ಲದೆ, ನೀರಾವರಿ ಸೌಲಭ್ಯವೂ ಇಲ್ಲದೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆಯೂ ಕಾಡುತ್ತಿದೆ ಎಂದು ಹೇಳಿದರು.
ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಾಸುದೇವ ಮೇಟಿ ಬಣದ ನೇತೃತ್ವದಲ್ಲಿ ಆ. 27ರಿಂದ ಸನ್ನತಿ ಬ್ರಿಡ್ಜ್ ಕಮ್ ಬ್ಯಾರೇಜ್ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು. ರೈತರಿಗೆ ಪರಿಹಾರ ಸಿಗುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಹಣಮಂತ್ರಾಯಗೌಡ ಪರಸನಹಳ್ಳಿ ಎಚ್ಚರಿಕೆ ನೀಡಿದರು.
ಯಾದಗಿರಿ, ಶಹಾಪುರ ಹಾಗೂ ಚಿತ್ತಾಪುರ ಕ್ಷೇತ್ರಗಳ ಶಾಸಕರು ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಿ ನ್ಯಾಯ ಒದಗಿಸಬೇಕು. ಶಾಸಕರು ಬಾರದಿದ್ದರೆ ಅವರು ಬರುವವರೆಗೂ ಧರಣಿ ಮುಂದುವರಿಸಲಾಗುವುದು. ಪರಿಹಾರ ನೀಡದಿದ್ದರೆ ಬ್ಯಾರೇಜ್‌ನ ಗೇಟ್‌ಗಳನ್ನು ತೆರೆಯುವಂತಹ ತೀವ್ರ ಹೋರಾಟಕ್ಕೂ ಮುಂದಾಗಬೇಕಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಯಾದಗಿರಿ ಜಿಲ್ಲಾ ಕಾರ್ಯಾಧ್ಯಕ್ಷ ವೆಂಕೋಬಾ ಕಟ್ಟಿಮನಿ, ವರ್ಷಗಳಿಂದ ರೈತರು ತಮ್ಮ ಜಮೀನು ಕಳೆದುಕೊಂಡು ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ನ್ಯಾಯಾಲಯದ ಆದೇಶವಿದ್ದರೂ ಪರಿಹಾರ ಸಿಗದಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ರೈತರಿಗೆ ನ್ಯಾಯ ಒದಗಿಸಬೇಕು. ಪರಿಹಾರ ಸಿಗುವವರೆಗೂ ಸನ್ನತಿ ಬ್ರಿಡ್ಜ್ ಕಮ್ ಬ್ಯಾರೇಜ್‌ನಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಧರ್ಮರಾಜ ತಹಶೀಲ್ದಾರ್, ದೇವಿಂದ್ರ ಹೊಸಮನಿ, ಧರ್ಮರೆಡ್ಡಿ ಕನ್ಯಾಕೋಳೂರು, ಪ್ರಭುದ್ದ ಹಾಗೂ ಚಂದ್ರಶೇಖರ ಉಪಸ್ಥಿತರಿದ್ದರು.






