Yadgiri | ಕಳ್ಳಸಂತೆಗೆ ಸಾಗಿಸುತ್ತಿದ್ದ 37.50 ಕ್ವಿಂಟಲ್ ಅಕ್ಕಿ ಜಪ್ತಿ : ಪ್ರಕರಣ ದಾಖಲು

ಯಾದಗಿರಿ: ಸರ್ಕಾರದ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ವಿತರಿಸಲಾಗುವ ಅಕ್ಕಿಯನ್ನು ಅಕ್ರಮವಾಗಿ ಕಳ್ಳಸಂತೆಗೆ ಸಾಗಿಸಲು ಯತ್ನಿಸುತ್ತಿದ್ದ ವಾಹನದ ಮೇಲೆ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿ, ಅಕ್ಕಿ ಮತ್ತು ವಾಹನವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಗುರುಮಠಕಲ್ ಪಟ್ಟಣದ ಗಡಿ ಭಾಗದಲ್ಲಿರುವ ‘ಯೂಥ್ ಫಾರ್ ಆಕ್ಷನ್’ ಕಟ್ಟಡದ ಬಳಿ ಗುರುಮಠಕಲ್–ಗಾಜರಕೋಟೆ ಮುಖ್ಯ ರಸ್ತೆಯಲ್ಲಿ ಅಕ್ಕಿಯನ್ನು ಅಕ್ರಮವಾಗಿ ಲೋಡ್ ಮಾಡಿ ನಿಲ್ಲಿಸಲಾಗಿದೆ ಎಂಬ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಆಧಾರದ ಮೇಲೆ ಆಹಾರ ನಿರೀಕ್ಷಕರು ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ವಾಹನವನ್ನು ಪರಿಶೀಲಿಸಿದ್ದಾರೆ.
ದಾಳಿಯಲ್ಲಿ ಅಂದಾಜು 1,29,750 ರೂ. ಮೌಲ್ಯದ 37.50 ಕ್ವಿಂಟಲ್ ಅಕ್ಕಿ ಹಾಗೂ ಅಂದಾಜು 2,50,000 ರೂ. ಮೌಲ್ಯದ ಬಿಳಿ ಬಣ್ಣದ ಮಹೀಂದ್ರಾ ಬೊಲೆರೊ ಪಿಕ್‌ಅಪ್ ಗೂಡ್ಸ್ ಕ್ಯಾರಿಯರ್ ವಾಹನ (ಕೆಎ-32-ಎಂಎ-2217) ಜಪ್ತಿ ಮಾಡಲಾಗಿದೆ.
ಈ ಕುರಿತು ಅ.2ರಂದು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ವಾಹನ ಚಾಲಕನ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ–1955ರ ಕಲಂ 3 ಮತ್ತು 7ರ ಅಡಿಯಲ್ಲಿ ಪ್ರಕರಣ (ಪ್ರಕರಣ ಸಂಖ್ಯೆ: 206/2026) ದಾಖಲಿಸಿಕೊಳ್ಳಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.






