ಯಾದಗಿರಿ | ಆಶ್ರಯ ಲೇಔಟ್ ಅಕ್ರಮ ಒತ್ತುವರಿ ತೆರವಿಗೆ ಕ್ರಮ : ಲಲಿತಾ ಮೌಲಾಲಿ ಅನಪೂರ

ಯಾದಗಿರಿ: ನಗರದ ಆಶ್ರಯ ಲೇಔಟ್ ಅಕ್ರಮ ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಮೌಲಾಲಿ ಅನಪೂರ ತಿಳಿಸಿದರು.
ನಗರದ ಪಿಲ್ಟರ್ ಬೆಡ್ ಹಿಂದುಗಡೆಯ ಆಶ್ರಯ ಲೇಔಟ್‌ನಲ್ಲಿ ಅಕ್ರಮವಾಗಿ ಕೆಲವು ನಿವಾಸಿಗಳು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ ಎನ್ನುವ ದೂರನ್ನು ಆಧರಿಸಿ ಶುಕ್ರವಾರ ಬೆಳಗ್ಗೆ ಆಶ್ರಯ ಲೇಔಟ್‌ಗೆ ಸದಸ್ಯರು ಹಾಗೂ ಪೌರಾಯುಕ್ತರ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಿಜವಾದ ಫಲಾನುಭವಿಗಳಿಗೆ ಯಾವುದೇ ತೊಂದರೆ ಮಾಡುವುದಿಲ್ಲ, ಅಕ್ರಮವಾಗಿ ಆಶ್ರಯ ನಿವೇಶನವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿ ಮಾರಾಟ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಇದರಲ್ಲಿ ಯಾವುದೇ ಮುಲಾಜಿ ಇಲ್ಲವೆಂದು ಸ್ಥಳದಲ್ಲಿದ್ದವರಿಗೆ ಹೇಳಿದರು.
ಆಶ್ರಯ ಲೇಔಟ್‌ನಲ್ಲಿ ಯಾರೂ ಅತಿಕ್ರಮಿಸಬಾರದು, ಒಂದು ವೇಳೆ ಯಾರಾದರೂ ಅಕ್ರಮವಾಗಿ ಲೇಔಟ್‌ನಲ್ಲಿ ಮನೆ ನಿರ್ಮಿಸಿಕೊಂಡಿದ್ದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು, ಹೈಟೆನ್ಸ್ ನ ವೈರ್ ಕೆಳಗಡೆ ಮನೆ ನಿರ್ಮಿಸಿಕೊಂಡವರು ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ರುಖಿಯಾ ಬೇಗಂ, ಸದಸ್ಯರಾದ ವಿಜಯಲಕ್ಷ್ಮೀ ಮಂಜುನಾಥ ದಾಸನಕೇರಿ, ಅಂಬಯ್ಯ ಶಾಬಾದಿ, ಚನ್ನಕೇಶಗೌಡ ಬಾಣತಿಹಾಳ, ಮಶೆಪ್ಪ ನಾಯಕ, ಹಣಮಂತ ನಾಯಕ, ಹಣಮಂತ ಇಟಗಿ, ವಾಹಬ್, ಇಸ್ಮಾಯಿಲ್‌ಖಾನ್, ವೆಂಕಟರಡ್ಡಿ ಹೊನಕೇರಿ, ಮನ್ಸೂರ್ ಅಹ್ಮದ್, ಗಣೇಶ ದುಪ್ಪಲ್ಲಿ, ಖಲೀಂ, ಚಂದ್ರಕಾಂತ ಮಡ್ಡಿ, ನಗರಸಭೆ ಎಇಇ ರಜನಿಕಾಂತ ಶೃಂಗೇರಿ, ಪರಿಸರ ಅಭಿಯಂತರ ಪ್ರಶಾಂತ, ಕಂದಾಯ ಅಧಿಕಾರಿ ಅಂಬಿಕೇಶ್ವರ, ಮಲ್ಲಿಕಾರ್ಜುನ ಕುರಕುಂಬಳ ಸೇರಿದಂತೆ ನಗರಸಭೆ ಸಿಬ್ಬಂದಿಗಳು ಇದ್ದರು.







