Yadgiri | ಅಕ್ರಮ ಅಕ್ಕಿ ಸಾಗಣೆ ಆರೋಪ : 8.49 ಕ್ವಿಂಟಲ್ ಅಕ್ಕಿ ವಶ
ಪ್ರಕರಣ ದಾಖಲು

ಯಾದಗಿರಿ: ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ವಿತರಿಸುವ ಅಕ್ಕಿಯನ್ನು ಕಪ್ಪುಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾದ ಪ್ರಕರಣವನ್ನು ಆಹಾರ ನಿರೀಕ್ಷಕರು ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿದ್ದಾರೆ.
ಶಹಾಪುರ ತಾಲೂಕಿನ ಭೀ-ಗುಡಿ ಕಡೆಯಿಂದ ಗೋಗಿಪೇಟ ಕಡೆಗೆ ಆಟೋದಲ್ಲಿ ಅಕ್ಕಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕೆಎ-32-ಎ-7569 ನೋಂದಣಿ ಸಂಖ್ಯೆಯ ಆಟೋವನ್ನು ಪರಿಶೀಲಿಸಿದಾಗ 8.49 ಕ್ವಿಂಟಲ್ ಅಕ್ಕಿ ಪತ್ತೆಯಾಗಿದೆ. ವಶಪಡಿಸಿಕೊಂಡ ಅಕ್ಕಿಯ ಅಂದಾಜು ಮೌಲ್ಯ 16,696 ರೂ. ಎಂದು ತಿಳಿದು ಬಂದಿದೆ.
ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ಆರೋಪದ ಮೇಲೆ ಆಟೋ ಚಾಲಕ ಮಹಮ್ಮದ್ಗೌಸ ಸದ್ದಾಂ (ಮಹಮ್ಮದ್ ಹುಸೇನ್ ಚೋರಗಸ್ತಿ ಅವರ ಪುತ್ರ) ವಿರುದ್ಧ ಅ. 12ರಂದು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ–1955ರ ಕಲಂ 3 ಮತ್ತು 7ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಸಂಖ್ಯೆ 129/2026 ಆಗಿದ್ದು, ಈ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.






