Yadgiri | ಲುಂಬಿನಿ ಉದ್ಯಾನವನದ ಮುಂದೆ ಗಣೇಶ ವಿಸರ್ಜನೆಗೆ ಅವಕಾಶ ನೀಡದಂತೆ ಅಂಬೇಡ್ಕರ್ ಸ್ವಾಭಿಮಾನ ಸೇನೆ ಮನವಿ

ಯಾದಗಿರಿ: ನಗರದ ಹೃದಯಭಾಗದಲ್ಲಿರುವ ಲುಂಬಿನಿ ಉದ್ಯಾನವನದ ಮುಂಭಾಗದಲ್ಲಿ ಈ ವರ್ಷ ಗಣೇಶ ವಿಸರ್ಜನೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಅಂಬೇಡ್ಕರ್ ಸ್ವಾಭಿಮಾನ ಸೇನೆ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೇನೆಯ ಜಿಲ್ಲಾ ಅಧ್ಯಕ್ಷ ಕಾಶೀನಾಥ್ ನಾಟೇಕಾರ್, ಗೌತಮ ಬುದ್ಧರ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಲುಂಬಿನಿ ಉದ್ಯಾನವನವು ನಗರದ ಪ್ರಮುಖ ಸಾರ್ವಜನಿಕ ತಾಣವಾಗಿದ್ದು, ಅದರ ಶಾಂತಿ, ಪಾವಿತ್ರ್ಯ ಹಾಗೂ ಪರಿಸರವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಪ್ರತಿವರ್ಷ ಉದ್ಯಾನವನದ ಮುಂಭಾಗದಲ್ಲಿರುವ ಸಣ್ಣ ಕೆರೆಯಲ್ಲಿ ಗಣೇಶ ವಿಸರ್ಜನೆ ನಡೆಯುತ್ತಿದ್ದು, ಈ ವರ್ಷವೂ ವಿಸರ್ಜನೆಗಾಗಿ ಸ್ಥಳವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಸ್ವಚ್ಛತಾ ಕಾರ್ಯಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಲುಂಬಿನಿ ಉದ್ಯಾನವನದ ಮುಂಭಾಗದಲ್ಲಿ ಗಣೇಶ ವಿಸರ್ಜನೆ ನಡೆಸಲು ಯಾವುದೇ ರೀತಿಯ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.
ಕೆರೆ ಸುತ್ತಮುತ್ತ ಬುದ್ಧನ ಧ್ವಜಗಳನ್ನು ಅಳವಡಿಸಿ ಸ್ಥಳದ ಶಾಂತಿ ಮತ್ತು ಪಾವಿತ್ರ್ಯವನ್ನು ಕಾಪಾಡಬೇಕು. ಉದ್ಯಾನವನದ ಸುತ್ತಮುತ್ತ ಕಸ, ತ್ಯಾಜ್ಯ ಹಾಗೂ ವಿಲೇವಾರಿ ವಸ್ತುಗಳನ್ನು ಹಾಕದಂತೆ ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಉದ್ಯಾನವನಕ್ಕೆ ಬೆಳಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಆಗಮಿಸುವ ಸಾರ್ವಜನಿಕರಿಗೆ ಮಾಲಿನ್ಯದಿಂದ ತೊಂದರೆ ಉಂಟಾಗುತ್ತಿದೆ. ಅಲ್ಲದೆ, ಉದ್ಯಾನವನದಲ್ಲಿ ವಾಕಿಂಗ್ ಪಾತ್, ಕುಡಿಯುವ ನೀರು, ಸಮರ್ಪಕ ಬೆಳಕಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕೊರತೆಯಿದೆ. ಈ ಎಲ್ಲ ಸೌಲಭ್ಯಗಳನ್ನು ತುರ್ತಾಗಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಡಳಿತ ಹಾಗೂ ನಗರಸಭೆ ಮನವಿಯನ್ನು ಪರಿಗಣಿಸಿ ಲುಂಬಿನಿ ಉದ್ಯಾನವನದ ಮುಂಭಾಗದಲ್ಲಿ ಈ ವರ್ಷ ಗಣೇಶ ವಿಸರ್ಜನೆಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕು. ಮನವಿಗೆ ಸ್ಪಂದಿಸದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಅಂಬೇಡ್ಕರ್ ಸ್ವಾಭಿಮಾನ ಸೇನೆ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಚಂದ್ರಕಾಂತ ಚಲುವಾದಿ, ಭೀಮಪ್ಪ ಕ್ಯಾತನಾಳ, ಪರಶುರಾಮ ಚಲುವಾದಿ ಸೇರಿದಂತೆ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.






