Yadgiri | ಜೆಸ್ಕಾಂ ಸಿಬ್ಬಂದಿಗೆ ವಾರ್ಷಿಕ ಕ್ರೀಡಾಕೂಟ

ಯಾದಗಿರಿ: ದಿನದ 24 ಗಂಟೆಯೂ ಒತ್ತಡದ ನಡುವೆ ಕಾರ್ಯನಿರ್ವಹಿಸುವ ಜೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿಗೆ ವಾರ್ಷಿಕ ಕ್ರೀಡಾಕೂಟವು ಮಾನಸಿಕ ನೆಮ್ಮದಿ ನೀಡುವುದರ ಜೊತೆಗೆ ಆರೋಗ್ಯವನ್ನು ಸದೃಢಗೊಳಿಸಲು ಸಹಕಾರಿಯಾಗುತ್ತದೆ ಎಂದು ಗುಲಬರ್ಗಾ ವೃತ್ತದ ಸಂಘಟನಾ ಕಾರ್ಯದರ್ಶಿ ಹಣಮಂತರೆಡ್ಡಿ ಹೇಳಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಜೆಸ್ಕಾಂ ಇಲಾಖೆಯ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒತ್ತಡರಹಿತ ಜೀವನ ನಡೆಸಲು ಪ್ರತಿದಿನ ಬೆಳಿಗ್ಗೆ ವಾಕಿಂಗ್, ಯೋಗ ಸೇರಿದಂತೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆಹಾರ ಸೇವನೆಯಲ್ಲೂ ಹಿತಮಿತ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಸೋಲನ್ನು ಗೆಲುವಿನ ಮೆಟ್ಟಿಲು ಎಂದು ಭಾವಿಸಿ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಬೇಕು ಎಂದರು.
ಜೆಸ್ಕಾಂ ಎಇಇ ಮಾರ್ಕಂಡೇಶ್ವರ ಮಾತನಾಡಿ, ಸಾರ್ವಜನಿಕ ಸೇವೆಯಲ್ಲಿ ಜೆಸ್ಕಾಂನ ಪಾತ್ರ ಮಹತ್ವದ್ದಾಗಿದೆ. ಹಗಲು-ರಾತ್ರಿ ಎನ್ನದೆ ಕಾರ್ಯನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಇಂತಹ ಕ್ರೀಡಾಕೂಟಗಳು ಉತ್ಸಾಹ ಮತ್ತು ಸಂತಸ ನೀಡುತ್ತವೆ ಎಂದು ಹೇಳಿದರು.
ಯಾದಗಿರಿ ಅಧ್ಯಕ್ಷ ದೇವೇಂದ್ರ, ಸಂಘಟನಾ ಕಾರ್ಯದರ್ಶಿ ಚಂದಪ್ಪ, ಶಾಖಾಧಿಕಾರಿ ನಂದಕುಮಾರ, ಅಧಿಕಾರಿಗಳಾದ ದೇವಪ್ಪ, ಮೋಹನ ಪವಾರ, ಓಂದೇವ, ಶರಣಪ್ಪ ನಾಯ್ಕಲ್, ಯಾಸಿನ್ ಪಾಶಾ ಸೇರಿದಂತೆ ಜೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಇಲಾಖೆಯ ಸಿಬ್ಬಂದಿ ಹಾಗೂ ಸಂಘದ ಪದಾಧಿಕಾರಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.






