Yadgiri | ಜು.12ರಂದು ಬಂಜಾರ ಸಮಾಜದ ವತಿಯಿಂದ ವರದಕ್ಷಿಣೆ ನಿಷೇಧ ಮಹಾಸಭೆ

ಯಾದಗಿರಿ : ವರದಕ್ಷಿಣೆ ಪದ್ಧತಿ ನಿರ್ಮೂಲನೆಗೆ ಪಣತೊಟ್ಟಿರುವ ಬಂಜಾರ ಸಮಾಜದ ವತಿಯಿಂದ ವರದಕ್ಷಿಣೆ ನಿಷೇಧ ಮಹಾಸಭೆ ಹಾಗೂ ಜನಜಾಗೃತಿ ಮಹಾಸಮಾವೇಶವನ್ನು ಜು.12ರಂದು ಬೆಳಗ್ಗೆ 10 ಗಂಟೆಗೆ ನಗರದ ಚಿತ್ತಾಪುರ ರಸ್ತೆಯ ಬಂಜಾರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಆಲ್ ಇಂಡಿಯಾ ಬಂಜಾರ ಸಂಘದ ರಾಜ್ಯಾಧ್ಯಕ್ಷ ದೇವರಾಜ್ ನಾಯಕ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಜಾರ ಸಮಾಜದಲ್ಲಿ ವರದಕ್ಷಿಣೆ ಎಂಬುದು ದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ಇದರಿಂದ ಸಾವಿರಾರು ಕುಟುಂಬಗಳು ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಟ ಅನುಭವಿಸುತ್ತಿವೆ. ಕೆಲವರು ಆತ್ಮಹತ್ಯೆಗೂ ಶರಣಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಸಮಾಜದ ಮುಖಂಡರು, ಹಿರಿಯರು ಹಾಗೂ ಯುವಕರು ಒಂದಾಗಿ ಚರ್ಚಿಸಿ ವರದಕ್ಷಿಣೆ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲು ಮಹಾಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಶಹಾಪುರ, ಯಾದಗಿರಿ, ವಡಗೇರಾ, ಸುರಪುರ, ಹುಣಸಗಿ ಹಾಗೂ ಗುರುಮಠಕಲ್ ಸೇರಿದಂತೆ ಜಿಲ್ಲೆಯ ಆರು ತಾಲೂಕುಗಳಿಂದ ನಾಯಕರು, ಡಾವ್, ಕಾರಬಾರಿ, ನಾಸಾಬಿ, ಹಸಾಬಿ ಸೇರಿದಂತೆ ಸಾವಿರಾರು ಸಮಾಜದ ಬಾಂಧವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರಿಗೆ ಸಮಾವೇಶದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ. ಸಮಾವೇಶದಲ್ಲಿ ಕಾರಬಾರಿ, ನಾಯಕರು ಹಾಗೂ ಡಾವ್‌ಗಳಿಗೆ ವರದಕ್ಷಿಣೆ ನಿಷೇಧದ ಪ್ರತಿಜ್ಞೆ ಬೋಧಿಸಲಾಗುವುದು ಎಂದು ತಿಳಿಸಿದರು.
ಸಮಾವೇಶದಲ್ಲಿ ವರದಕ್ಷಿಣೆ ನಿರ್ಮೂಲನೆ, ಆತ್ಮಹತ್ಯೆ ತಡೆ, ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸುವುದು ಹಾಗೂ ಹೆಣ್ಣು ಮಗುವನ್ನು ಮಹಾಲಕ್ಷ್ಮಿಯಾಗಿ ಗೌರವಿಸುವ ಸಂಕಲ್ಪ ಕೈಗೊಳ್ಳಲಾಗುವುದು ಎಂದು ದೇವರಾಜ್ ನಾಯಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಕಿಶನ ರಾಠೋಡ, ಬಂಗಾರು ರಾಠೋಡ, ವಿನೋದ ರಾಠೋಡ, ಆನಂದ, ಗೋವಿಂದ ರಾಠೋಡ, ವಿಜಯ ಜಾಧವ ಸೇರಿದಂತೆ ಹಲವರು ಉಪಸ್ಥಿತರಿದ್ದರು.






