ಯಾದಗಿರಿ | ಅತಿಥಿ ಶಿಕ್ಷಕರ ಹುದ್ದೆಗೆ ತಾತ್ಕಾಲಿಕ ನೇಮಕಕ್ಕೆ ಅರ್ಜಿ ಆಹ್ವಾನ

ಯಾದಗಿರಿ: ಯಾದಗಿರಿ ಜಿಲ್ಲೆಯ 2025-26ನೇ ಸಾಲಿನ ಬೋಧಿಸಲು ಖಾಲಿಯಿರುವ ವಿಷಯವಾರು ಅತಿಥಿ ಶಿಕ್ಷಕರ ಹುದ್ದೆಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಚನ್ನಬಸಪ್ಪ ಅವರು ತಿಳಿಸಿದ್ದಾರೆ.
ಕರ್ನಾಟಕ ವಸತಿ ಶಿಕ್ಷಣ ಸಂಘದಿಂದ ನಡೆಯುತ್ತಿರುವ ಶಾಲೆಗಳಾದ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಡಾ.ಬಿ.ಆರ್ ಅಂಬೇಡ್ಕರ್, ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗಳಲ್ಲಿ ಬೋಧಿಸಲು ಖಾಲಿಯಿರುವ ವಿಷಯವಾರು ಅತಿಥಿ ಶಿಕ್ಷಕರ ಹುದ್ದೆಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ವಸತಿ ಶಿಕ್ಷಣ ಸಂಘದ ಯಾದಗಿರಿ ಜಿಲ್ಲೆ ಸಮನ್ವಯ ಅಧಿಕಾರಿಗಳು ಹಾಗೂ ಯಾದಗಿರಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ವಿಷಯವಾರು ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ ದಾಖಲಾತಿಗಳು ಕಡ್ಡಾಯವಾಗಿ ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಪದವಿ ಮತ್ತು ಬಿಎಡ್‌ನಲ್ಲಿ ಕಡ್ಡಾಯವಾಗಿ ಆಂಗ್ಲ ಮಾಧ್ಯಮದಲ್ಲಿ ಅಧ್ಯಯನ (ಭಾಷಾ ವಿಷಯಗಳನ್ನು ಹೊರತು ಪಡಿಸಿ) ಮಾಡಿರುವ ಬಗ್ಗೆ ದಾಖಲೆಗಳನ್ನು ಸಲ್ಲಿಸಬೇಕು, ಹಾಗೂ ಆಂಗ್ಲ ಮಾಧ್ಯಮದಲ್ಲಿ ಭೋದಿಸುವ ಸಾಮರ್ಥ್ಯ ಹೊಂದಿರಬೇಕು. ಅತಿಥಿ ಶಿಕ್ಷಕರ ಹುದ್ದೆಗೆ 16,650 ರೂ. ಗಳ ಗೌರವ ಧನ ನೀಡಲಾಗುತ್ತದೆ.
ಅತಿಥಿ ಶಿಕ್ಷಕರ ನೇಮಕಾತಿಯ ಅವಧಿಯನ್ನು ಖಾಯಂ ಶಿಕ್ಷಕರು ಶಾಲೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಕೊಳ್ಳುವರೆಗೆ ಮಾತ್ರ ಇರುತ್ತದೆ. ಆಯಾ ಶಾಲಾ ಹಂತದಲ್ಲಿ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಸಂಬಂಧಪಟ್ಟ ವಸತಿ ಶಾಲೆಗಳಿಂದ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ಸಂಬಂಧಿಸಿದ ವಸತಿ ಶಾಲೆಗಳಲ್ಲಿ 2025ರ ಜೂ.13ರ ಸಂಜೆ 4 ಗಂಟೆಯ ಒಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.