Yadgiri | ರಕ್ತಹೀನತೆ ತಡೆಗೆ ಪೌಷ್ಟಿಕ ಆಹಾರ, ಸ್ವಚ್ಛತೆ ಅರಿವು ಅಗತ್ಯ: ಡಾ.ಮಹೇಶ್ ಬಿರಾದಾರ್

ಯಾದಗಿರಿ: ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿನ ರಕ್ತಹೀನತೆಯನ್ನು ಹೋಗಲಾಡಿಸಿ, ಅವರನ್ನು ಉತ್ತಮ ಆರೋಗ್ಯ ಹೊಂದಿದ ಸದೃಢರನ್ನಾಗಿಸಲು ಪೌಷ್ಟಿಕ ಆಹಾರ ನೀಡುವುದರ ಜೊತೆಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೋಷಕರ ಪಾತ್ರವೂ ಮಹತ್ವದ್ದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಬಿರಾದಾರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯಾದಗಿರಿ, ಮಿಷನ್ ಶಕ್ತಿ ಯೋಜನೆ ಹಾಗೂ ಐಪಿಇ ಗ್ಲೋಬಲ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ‘ಪೋಷಣ್ ರನ್’, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ 9ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಸಮಾರೋಪ ಸಮಾರಂಭ ಹಾಗೂ ‘ಸ್ವಚ್ಛತಾ ಹಿ ಸೇವಾ’ ಅಭಿಯಾನದ ‘ನಮ್ಮ ಅಂಗನವಾಡಿ ನಮ್ಮ ಜವಾಬ್ದಾರಿ’ ಕಾರ್ಯಕ್ರಮದ ಅಂಗವಾಗಿ ಗುರುವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶವು ಆರ್ಥಿಕ, ಶೈಕ್ಷಣಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಮುಖ್ಯವಾಗಿ ಕೃಷಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು, ಇಡೀ ವಿಶ್ವಕ್ಕೆ ಆಹಾರವನ್ನು ಸರಬರಾಜು ಮಾಡುವ ದೇಶವಾಗಿರುವುದು ಹೆಮ್ಮೆಯ ವಿಷಯವಾಗಿದೆ. ಅದಾಗ್ಯೂ ದೇಶದಲ್ಲಿ ಅಪೌಷ್ಟಿಕತೆ ಸಮಸ್ಯೆ ಇದೆ. ಜನರಲ್ಲಿನ ರಕ್ತಹೀನತೆ ಸಮಾಜಕ್ಕೆ ಸವಾಲಾಗಿದೆ. ರಕ್ತಹೀನತೆಯಿಂದ ಮಕ್ಕಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗುವುದಿಲ್ಲ. ಇದರಿಂದ ಅವರ ಶೈಕ್ಷಣಿಕ ಅಭಿವೃದ್ಧಿಯ ಮೇಲೂ ಪರಿಣಾಮ ಬೀರುತ್ತದೆ ಎಂದರು.
ದೇಶದಲ್ಲಿ ಆಹಾರದ ಕೊರತೆಯಿಲ್ಲ, ಆದರೆ ಅರಿವಿನ ಕೊರತೆಯಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಮಕ್ಕಳಿಗೆ ತಲುಪಿಸುವುದು ಹಾಗೂ ಮಕ್ಕಳ ಬೆಳವಣಿಗೆ ಕುಂಠಿತವಾಗಲು ಸೂಕ್ತ ಕಾರಣಗಳನ್ನು ಪತ್ತೆಹಚ್ಚಿ ಅಗತ್ಯ ರಕ್ಷಣೆ ಒದಗಿಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊಂದಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಶಿರಸಗಿ, ಜೀವನದಲ್ಲಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ಹಾಗೂ ಮಕ್ಕಳಲ್ಲಿ ರಕ್ತಹೀನತೆ ತಡೆಗಟ್ಟಬೇಕಿದೆ. ಅಪೌಷ್ಟಿಕತೆಯನ್ನು ಹೋಗಲಾಡಿಸಲು ಕೇವಲ ಅಂಗನವಾಡಿಗಳಿಂದ ಸಾಧ್ಯವಿಲ್ಲ. ಇದರಲ್ಲಿ ಕುಟುಂಬ ಹಾಗೂ ಪೋಷಕರ ಪಾತ್ರವೂ ಹೆಚ್ಚಾಗಿದೆ ಎಂದರು.
ದೇಶವು ಕೃಷಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದರೂ ಅಪೌಷ್ಟಿಕತೆಯ ಸಮಸ್ಯೆ ಮುಂದುವರಿದಿದೆ. ಪ್ರತಿಯೊಂದು ಕುಟುಂಬವೂ ಸಮತೋಲಿತ ಆಹಾರ ಸೇವಿಸುವುದು ಬಹಳ ಮುಖ್ಯ. ರಕ್ತಹೀನತೆ ಹೊಂದಿರುವವರು ವೈದ್ಯರ ಸಲಹೆಯ ಮೇರೆಗೆ ದೈನಂದಿನ ಆಹಾರದಲ್ಲಿ ವಿಟಮಿನ್ ಹಾಗೂ ಪ್ರೋಟೀನ್ ಅಂಶವುಳ್ಳ ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯವಂತರಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ರುದ್ರಗೌಡ ಪಾಟೀಲ್, ತರಬೇತಿದಾರ ಆದಿ ಹಾದಿಮನಿ, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ವಂದನಾ ಜಿ., ವೈದ್ಯಾಧಿಕಾರಿ ವಿನೂತ ಪಾಟೀಲ್, ಐಇಸಿ ಅಧಿಕಾರಿ ಲಕ್ಷ್ಮಿ ಮುಂಡಸವರ್, ಐಪಿಇ ಗ್ಲೋಬಲ್ ಸಂಸ್ಥೆಯ ಕನಿಷ್ಕ, ಸಿಬ್ಬಂದಿ ಪ್ರಶಾಂತ್ ಸಾಹು ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಸಾವಿತ್ರಿ ಗಾಳಿ ನಿರೂಪಿಸಿದರು. ಅನೀಲ್ ವಂದಿಸಿದರು.






