Yadgiri | ಸರಕಾರಿ ಅಧಿಕಾರಿಗಳು, ನೌಕರರ ವಿರುದ್ಧ ಆಧಾರರಹಿತ ಆರೋಪ : ಪ್ರದೀಪ ಅಣಬಿ ವಿರುದ್ಧ ಕ್ರಮಕ್ಕೆ ಆಗ್ರಹ

ಯಾದಗಿರಿ: ಕರ್ತವ್ಯನಿರತ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿ ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಯಾದಗಿರಿ ಜಿಲ್ಲಾ ಘಟಕ, ಪ್ರದೀಪ ಅಣಬಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದೆ.
ಯಾದಗಿರಿ ಜಿಲ್ಲೆಯ ವಿವಿಧ ಇಲಾಖೆಗಳ ನೌಕರರು ಸಾರ್ವಜನಿಕ ಸೇವೆಯಲ್ಲಿ ನಿರತರಾಗಿದ್ದು, ಕೆಲವರು ನೌಕರರ ವರ್ಗಾವಣೆ ಹಾಗೂ ಸರ್ಕಾರಿ ನೌಕರರ ಸಂಘದ ಸದಸ್ಯತ್ವಕ್ಕೆ ಸಂಬಂಧಿಸಿದ ಆಡಳಿತಾತ್ಮಕ ವಿಚಾರಗಳಲ್ಲಿ ಪದೇಪದೇ ದೂರು ಸಲ್ಲಿಸಿ ನೌಕರರಿಗೆ ಒತ್ತಡ ಹೇರುತ್ತಿದ್ದಾರೆ ಎಂದು ಸಂಘ ಆರೋಪಿಸಿದೆ.
ನೌಕರರ ವರ್ಗಾವಣೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯ ಸಕ್ಷಮ ಪ್ರಾಧಿಕಾರದ ಆಡಳಿತಾತ್ಮಕ ವ್ಯಾಪ್ತಿಗೆ ಒಳಪಟ್ಟಿದ್ದು, ಈ ವಿಚಾರದಲ್ಲಿ ಮೂರನೇ ವ್ಯಕ್ತಿಗಳಿಗೆ ಕಾನೂನಾತ್ಮಕ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳು ಸ್ಪಷ್ಟಪಡಿಸಿವೆ ಎಂದು ಸಂಘ ತಿಳಿಸಿದೆ.
ಜಿಲ್ಲಾ ಪಂಚಾಯಿತಿ ಯಾದಗಿರಿಯ ಅಧೀಕ್ಷಕ ಈರಯ್ಯ ಅವರ ವರ್ಗಾವಣೆಗೆ ಸಂಬಂಧಿಸಿದಂತೆ ಪ್ರದೀಪ ಅಣಬಿ ಅವರು ಹಲವು ಬಾರಿ ದೂರು ಸಲ್ಲಿಸಿದ್ದು, ಸರ್ಕಾರದಿಂದ ವರ್ಗಾವಣೆಗೆ ಅವಕಾಶವಿಲ್ಲ ಎಂಬುದನ್ನು ತಿಳಿಸಿದ್ದರೂ ದೂರು ಸಲ್ಲಿಸುವುದನ್ನು ಮುಂದುವರಿಸಿದ್ದಾರೆ ಎಂದು ಸಂಘ ದೂರಿದೆ.
ಈ ಹಿನ್ನೆಲೆಯಲ್ಲಿ ಆಡಳಿತಾತ್ಮಕ ನಿಯಮಾವಳಿಗಳ ಕುರಿತು ಸ್ಪಷ್ಟನೆ ನೀಡಲು ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಆದರೆ, ಇದನ್ನು ಒಪ್ಪದೆ ದ್ವೇಷಪೂರಿತ ಮನೋಭಾವದಿಂದ ಕರ್ತವ್ಯನಿರತ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಹಲ್ಲೆ ಯತ್ನ ಮತ್ತು ಜಾತಿ ನಿಂದನೆ ಆರೋಪಗಳನ್ನು ಒಳಗೊಂಡ ದೂರು ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಶೋಷಿತ ಸಮುದಾಯಗಳ ರಕ್ಷಣೆಗೆ ರೂಪಿಸಿರುವ ಕಾನೂನುಗಳನ್ನು ವೈಯಕ್ತಿಕ ದ್ವೇಷ ಸಾಧಿಸಲು ಅಥವಾ ಸರ್ಕಾರಿ ನೌಕರರ ಮೇಲೆ ಕಾನೂನುಬಾಹಿರ ಒತ್ತಡ ಹೇರಲು ದುರುಪಯೋಗಪಡಿಸಿಕೊಳ್ಳುವುದು ಖಂಡನೀಯ. ಇಂತಹ ದೂರುಗಳಿಂದ ಪ್ರಾಮಾಣಿಕ ನೌಕರರ ಸಾಮಾಜಿಕ ಗೌರವಕ್ಕೆ ಧಕ್ಕೆಯಾಗುವುದಲ್ಲದೆ, ಅವರು ಮಾನಸಿಕ ಆತಂಕ ಹಾಗೂ ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘ ತಿಳಿಸಿದೆ.
ಪ್ರದೀಪ ಅಣಬಿ ಅವರು ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಹೆಸರಿನ ಸಂಘಟನೆ ಹಾಗೂ ಅವರು ಸಲ್ಲಿಸುತ್ತಿರುವ ದೂರುಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಸಂಘ ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸುಳ್ಳು ಹಾಗೂ ದುರುದ್ದೇಶಪೂರಿತ ದೂರು ಸಲ್ಲಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಜಾತಿ ನಿಂದನೆ ದೂರಿನ ಕುರಿತು ಸಮಗ್ರ ತನಿಖೆ ನಡೆಸಿ, ಸರ್ಕಾರಿ ನೌಕರರು ನಿರ್ಭಯವಾಗಿ ಕರ್ತವ್ಯ ನಿರ್ವಹಿಸಲು ಅಗತ್ಯ ರಕ್ಷಣೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಯಾದಗಿರಿ ಜಿಲ್ಲಾ ಘಟಕ ಒತ್ತಾಯಿಸಿದೆ.






