Yadgiri | ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿರುವ ಒತ್ತುವರಿ ತೆರವಿಗೆ ಭೀಮುನಾಯಕ ಆಗ್ರಹ

ಯಾದಗಿರಿ: ಸೇಡಂ–ಯಾದಗಿರಿ ರಾಜ್ಯ ಹೆದ್ದಾರಿ 63ರ ಟಿಪ್ಪು ವೃತ್ತದಿಂದ ಗಂಗಾನಗರದವರೆಗೆ ಸ್ಥಗಿತಗೊಂಡಿರುವ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪೂರ್ಣಗೊಳಿಸಲು ತಕ್ಷಣ ಒತ್ತುವರಿ ತೆರವುಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಕೆಕೆಆರ್‌ಡಿಬಿ ಮ್ಯಾಕ್ರೋ ಯೋಜನೆಯಡಿ 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದರೂ, ಕಾಮಗಾರಿ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿರುವ ಒತ್ತುವರಿಗಳನ್ನು ನಗರಸಭೆ ತೆರವುಗೊಳಿಸಿದರೆ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಗೊಳಿಸಲು ಅನುಕೂಲವಾಗಲಿದೆ. ಈಗಾಗಲೇ ಸ್ಥಳೀಯರು ಸ್ವಯಂಪ್ರೇರಣೆಯಿಂದ ಕೆಲವು ಒತ್ತುವರಿಗಳನ್ನು ತೆರವುಗೊಳಿಸಿದ್ದಾರೆ. ಉಳಿದ ಒತ್ತುವರಿಗಳನ್ನು ತೆರವುಗೊಳಿಸಲು ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳು ತಕ್ಷಣ ಆದೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಅಧಿಕಾರಿಗಳು ವಿಳಂಬ ಮಾಡದೆ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಮಲ್ಲು ಮಾಳೀಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ಭೀಮಾಶಂಕರ ಹತ್ತಿಕುಣಿ, ನಿಂಗಪ್ಪ ಗುಡಗುಡಿ, ವಿಶ್ವರಾಜ ಹೊನಗೇರಾ, ಭೀಮರಾಯ ರಾಮಸಮುದ್ರ ಹಾಗೂ ಅಶೋಕ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.






