Yadgiri | ಊರಿಗೆ ತೆರಳಲು ವಾಹನಗಳು ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ ಚಾಲಕ !

ಯಾದಗಿರಿ: ಕರ್ತವ್ಯ ಲೋಪದ ಹಿನ್ನೆಲೆ ಸೇವೆಯಿಂದ ವಜಾಗೊಂಡಿದ್ದ ಕೆಕೆಆರ್‌ಟಿಸಿ ಚಾಲಕ-ನಿರ್ವಾಹಕನೊಬ್ಬ ಬಸ್ ಕಳ್ಳತನ ಮಾಡಿದ ಘಟನೆ ಯಾದಗಿರಿ ತಾಲೂಕಿನ ಸೈದಾಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮಾ.9ರಂದು ನಡೆದ ಈ ಘಟನೆ ನಡೆದಿದ್ದು, ಸೇವೆಯಿಂದ ವಜಾಗೊಂಡಿರುವ ಮಹಿಪಾಲರೆಡ್ಡಿ ಈ ಕೃತ್ಯ ಎಸಗಿದ್ದಾನೆ. ಮಹಿಪಾಲರೆಡ್ಡಿ ಸೈದಾಪುರ ಬಸ್ ನಿಲ್ದಾಣದಿಂದ ಬಸ್ ಕದ್ದೊಯ್ದಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ಸೇರಿದ ಬಸ್‌ನ್ನು ತನ್ನ ಊರಾದ ರಾಚನಳ್ಳಿಗೆ ಹೋಗಲು ವಾಹನಗಳಿಲ್ಲದ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿದ್ದ ಬಸ್‌ನ್ನು ಚಾಲನೆ ಮಾಡಿಕೊಂಡು ಕೊಂಡೊಯ್ದಿದ್ದಾನೆ ಎಂದು ತಿಳಿದುಬಂದಿದೆ.
ಕದ್ದೊಯ್ದ ಬಸ್‌ನ್ನು ತನ್ನ ಊರಿನ ದೇವಸ್ಥಾನದ ಮುಂದೆ ನಿಲ್ಲಿಸಲಾಗಿದ್ದು, ಈ ದೃಶ್ಯಾವಳಿಗಳೆಲ್ಲ ಸಿಸಿಟಿವಿಯಲ್ಲಿ ದಾಖಲಾಗಿವೆ. ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನುವ ಅನುಮಾನವೂ ವ್ಯಕ್ತವಾಗಿದೆ.
ಈ ಹಿಂದೆ ಕೂಡ ಕರ್ತವ್ಯ ಲೋಪದ ಹಿನ್ನೆಲೆ ಅಮಾನತುಗೊಂಡಿದ್ದ ಆರೋಪಿಯ ವಿರುದ್ಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಸ್ ಅನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.





