Yadgiri | ಜಿಲ್ಲಾದ್ಯಂತ ಕನ್ನಡ ರಾಜ್ಯೋತ್ಸವ ಕಡ್ಡಾಯವಾಗಿ ಆಚರಿಸಿ: ವಿಶ್ವಾರಾದ್ಯ ದಿಮ್ಮೆ

ಯಾದಗಿರಿ: ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ಜಿಲ್ಲೆ, ತಾಲೂಕು ಹಾಗೂ ಹೋಬಳಿ ಸೇರಿದಂತೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಕಡ್ಡಾಯವಾಗಿ ಆಚರಿಸಬೇಕು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ವಿಶ್ವಾರಾದ್ಯ ದಿಮ್ಮೆ ಸೂಚನೆ ನೀಡಿದರು.
ನಗರದ ಕಸಾಪ ಭವನದಲ್ಲಿ ನಡೆದ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಸಂಘಟನೆಯ ಪ್ರತಿಯೊಬ್ಬರೂ ತಮ್ಮ ತಮ್ಮ ಪ್ರದೇಶಗಳಲ್ಲಿ ಕನ್ನಡದ ಹಬ್ಬವನ್ನು ಕಡ್ಡಾಯವಾಗಿ ಆಚರಿಸಬೇಕು. ಅಗತ್ಯವಿದ್ದಲ್ಲಿ ಧ್ವಜಸ್ತಂಭಗಳನ್ನು ನಿರ್ಮಿಸಿಕೊಂಡು ರಾಜ್ಯೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಂಘಟನೆಯ ಸಿದ್ಧಾಂತಗಳ ಆಧಾರದ ಮೇಲೆ ತಳಮಟ್ಟದಿಂದ ಸೇನೆಯನ್ನು ಕಟ್ಟಬೇಕು. ತಾಲೂಕು ಹಾಗೂ ವಲಯಗಳಲ್ಲಿ ಕನ್ನಡ ನಾಡು, ನುಡಿ, ನೆಲ, ಜಲ ಸೇರಿದಂತೆ ಜನರ ಹಕ್ಕುಗಳು ಮತ್ತು ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ನಡೆಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ನಡೆಯುವ ಕನ್ನಡಪರ, ಜನಪರ, ಸಮಾಜಪರ ಹಾಗೂ ಶಿಕ್ಷಣಪರ ಹೋರಾಟಗಳಲ್ಲಿ ಎಲ್ಲರೂ ಸಿದ್ಧರಿದ್ದು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ಹಾವಳಿ ಹೆಚ್ಚಾಗಿದ್ದು, ವಿಶೇಷವಾಗಿ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಈ ಕುರಿತು ಮುಂಬರುವ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು. ಈ ಹೋರಾಟಕ್ಕೆ ಎಲ್ಲರೂ ಸನ್ನದ್ಧರಾಗಿರಬೇಕು ಎಂದು ತಿಳಿಸಿದರು.
ನಮ್ಮ ಕರ್ನಾಟಕ ಸೇನೆಯ ರಾಜ್ಯ ಸಂಚಾಲಕ ಭೀಮಣ್ಣ ಶಖಾಪುರ ಮಾತನಾಡಿ, ನವೆಂಬರ್ 1ರ ರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತವಾಗಬಾರದು. ಜಿಲ್ಲೆಯ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಮೂಲಕ ನಂಬರ್ ಒನ್ ಸಂಘಟನೆಯಾಗುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಹೇಳಿದರು.
ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮರದೀಪ ಮಾತನಾಡಿ, ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸಬೇಕು. ಗ್ರಾಮ ಹಾಗೂ ಹೋಬಳಿ ಮಟ್ಟದಿಂದ ಮೇಲ್ಮುಖವಾಗಿ ಸಂಘಟಿತರಾಗುತ್ತಾ ಹೋರಾಟಗಳನ್ನು ರೂಪಿಸಿಕೊಂಡು ಸಾಗಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮು ಪೂಜಾರಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕು. ಶ್ರೀದೇವಿ ಕಟ್ಟಿಮನಿ, ಅಬ್ದುಲ್ ಅಜೀಜ್, ಚೆನ್ನಬಸವ ಕನಕ, ದೀಪಕ್ ಒಡೆಯರ್, ಶಿವಶರಣಪ್ಪ ಕುಂಬಾರ, ಅಂಬ್ರೇಶ್ ತೆಲಗೂರು, ವೀರೇಶ ಸಜ್ಜನ್, ಸತೀಶ ಜಡಿ, ಭೀಮಣ್ಣಗೌಡ ಪೊ. ಪಾಟೀಲ್, ಅಬ್ದುಲ್ ರಿಯಾಜ್ ಸಾಹುಕಾರ, ವೆಂಕಟೇಶ ಪ್ಯಾಪ್ಲಿ, ಸಿದ್ದು ಪಟ್ಟೇದಾರ, ಶ್ರೀಮತಿ ಸಂಗೀತಾ ಕೋತಿನ್ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.






