Yadgiri | ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಭಗವಾನ್ ಬಿರ್ಸಾ ಮುಂಡಾ ಜಯಂತಿ ಆಚರಣೆ

ಯಾದಗಿರಿ: ಬುಡಕಟ್ಟು ಸಮುದಾಯದ ಪ್ರೀತಿಯ ನಾಯಕ, ‘ಧರ್ತಿ ಆಬಾ’ (ಭೂಮಿಯ ತಂದೆ) ಎಂದೇ ಖ್ಯಾತರಾದ ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿ ಅಂಗವಾಗಿ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಚಂದಪ್ಪ ನಾಯಕ, ದೇಶದ ಹೆಮ್ಮೆಯ ಕ್ರಾಂತಿಕಾರಿ ಹಾಗೂ ಬುಡಕಟ್ಟು ಸಮುದಾಯದ ರಕ್ಷಕ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನದ ಸ್ಮರಣಾರ್ಥ ನಾವೆಲ್ಲರೂ ಒಂದಾಗಿದ್ದೇವೆ. ಬ್ರಿಟಿಷರ ಗುಲಾಮಗಿರಿಯನ್ನು ಧಿಕ್ಕರಿಸಿ, ತಮ್ಮ ಸಮುದಾಯದ ಹಕ್ಕುಗಳಿಗಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಬಿರ್ಸಾ ಮುಂಡಾ ಅವರ ಜೀವನ ಕೇವಲ ಇತಿಹಾಸವಲ್ಲ, ಬದಲಿಗೆ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ದೇಶಕ್ಕಾಗಿ ಬುಡಕಟ್ಟು ನಾಯಕರು ನೀಡಿದ ಅಪ್ರತಿಮ ಕೊಡುಗೆಯನ್ನು ಗುರುತಿಸಿ, 2021ರ ನವೆಂಬರ್ 10ರಂದು ಕೇಂದ್ರ ಸಚಿವ ಸಂಪುಟದ ಅನುಮೋದನೆಯೊಂದಿಗೆ ಪ್ರತಿ ವರ್ಷ ನವೆಂಬರ್ 15ರಂದು ‘ಜನಜಾತೀಯ ಗೌರವ ದಿವಸ’ ಆಚರಿಸಲು ಅಧಿಕೃತವಾಗಿ ಘೋಷಿಸಿದೆ. ಆ ಮೂಲಕ ಇತಿಹಾಸದಲ್ಲಿ ಸೂಕ್ತ ಮನ್ನಣೆ ದೊರೆಯದ ಬುಡಕಟ್ಟು ವೀರರ ಕೊಡುಗೆಗೆ ನ್ಯಾಯ ಒದಗಿಸಲಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮರೆಮಾಚಲ್ಪಟ್ಟಿದ್ದ ಬುಡಕಟ್ಟು ವೀರರ ಕೊಡುಗೆಯನ್ನು ಇಂದು ಇಡೀ ದೇಶ ಸ್ಮರಿಸುತ್ತಿದೆ. ಯುವ ಪೀಳಿಗೆಗೆ ಬಿರ್ಸಾ ಮುಂಡಾ ಅವರ ಛಲ, ದೇಶಭಕ್ತಿ ಮತ್ತು ಧೈರ್ಯ ಆದರ್ಶವಾಗಬೇಕು. ದೇಶದ ಸಂಸ್ಕೃತಿ, ಐಕ್ಯತೆ ಹಾಗೂ ಅಭಿವೃದ್ಧಿಗಾಗಿ ನಾವೆಲ್ಲರೂ ನಮ್ಮದೇ ಆದ ಕೊಡುಗೆ ನೀಡಲು ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ, ಬಿಜೆಪಿ ಯುವ ನಾಯಕ ಶ್ರೀಧರ ಸಾಹುಕಾರ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಯುವಮೋರ್ಚಾ ಅಧ್ಯಕ್ಷ ಲಕ್ಷ್ಮಿಪುತ್ರ, ಮಲ್ಲು ಕೋಲಿವಾಡ, ಶರಣುಗೌಡ ಕ್ಯಾತನಾಳ, ಸಲ್ಲು ದಂಡಿನ, ಮಲ್ಲಿಕಾರ್ಜುನ ಜೊಲ್ಲಪ್ಪನವರ್, ರಾಮಣ್ಣ, ಪಕೀರಪ್ಪ ಪೂಜಾರಿ, ತಾಯಪ್ಪ ದೊರಿ, ವಿರೇಶ್, ಯಲ್ಲಪ್ಪ ಮಾಲೀಕೇರಿ, ಸ್ವಾಮಿದೇವನ್ ದಾಸನಕೇರಿ, ಮೌನೇಶ ತುಂಬಳ, ಮಲ್ಲು ಸ್ವಾಮಿ, ವೆಂಕಟೇಶ, ಬಸವರಾಜ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.






