ಯಾದಗಿರಿ | ಶತಮಾನದ ಭೀಮಾ ಸೇತುವೆಗಿಲ್ಲ ಸಂರಕ್ಷಣೆ ಭಾಗ್ಯ : ಉಮೇಶ್ ಕೆ. ಮುದ್ನಾಳ

ಯಾದಗಿರಿ: ಹೊರ ವಲಯದಲ್ಲಿರುವ ಭೀಮಾ ಸೇತುವೆಯ ಎಡ ಮತ್ತು ಬಲಭಾಗದಲ್ಲಿ ಗಿಡಗಂಟಿಗಳು ಬೆಳೆದಿದ್ದು, ಜಿಲ್ಲಾಡಳಿತ ವಿರುದ್ಧ ವಾಹನ ಸವಾರರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಖಿಲ ಭಾರತೀಯ ಕೋಲಿ ಸಮಾಜ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ ರವರ ಆಕ್ರೋಶ ವ್ಯಕ್ತಪಡಿಸಿದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೇವಲ ಕಾಟಾಚಾರಕ್ಕೆ ಗಿಡಗಂಟಿಗಳ ಕೊಂಬೆಗಳನ್ನು ಕತ್ತರಿಸಿದ್ದು, 'ಪರ್ಸೆಂಟೇಜ್ ಆಸೆಗಾಗಿ ಕೆಲಸ ಮಾಡುವ ಅಧಿಕಾರಿಗಳಿಂದಾಗಿ ಇಂದು ಸುಭದ್ರವಾಗಿರುವ ಸೇತುವೆ ಹಾಳಾಗುತ್ತಿದೆ ಎಂದು ಉಮೇಶ ಮುದ್ನಾಳ ಆರೋಪಿಸಿದರು.
ಇದು ವಿಜಯಪುರ-ಹೈದರಾಬಾದ್ ಹೆದ್ದಾರಿಯಾಗಿದ್ದು, ಇದರ ಮೇಲೆಯೇ ಜನಪ್ರತಿನಿಧಿಗಳು ಅಧಿಕಾರಿಗಳು ಸಂಚಾರ ಮಾಡುತ್ತಾರೆ. ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಸೇತುವೆ ಮೇಲೆ ದಿನ ನಿತ್ಯ ಸಾವಿರಾರು ಭಾರಹೊತ್ತು ವಾಹನಗಳು ಸಂಚರಿಸುತ್ತವೆ. ಇದಲ್ಲದೇ ಜಿಲ್ಲೆಯ ಹಳೆಯ ಸ್ಮಾರಕವೂ ಆಗಿರುವ ಈ ಸೇತುವೆಯ ರಕ್ಷಣೆಗೆ ಜಿಲ್ಲಾಡಳಿತ ಕೂಡ ಧಾವಿಸುವುದು ಅಗತ್ಯವಿದೆ. ಏನಾದರೂ ಅವಘಡ ಸಂಭವಿಸುವ ಮುನ್ನವೇ ಇದನ್ನು ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಅಗತ್ಯ ಕ್ರಮಕೈಗೊಳ್ಳಬೇಕು. ತುರ್ತಾಗಿ ಶಿಥಿಲಗೊಂಡ ಸ್ಥಳಗಳನ್ನು ಗುರುತಿಸಿ ಸೇತುವೆಯ ಸಂರಕ್ಷಣೆಗೆ ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಸೇತುವೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದು, ತುಂಬಾ ಗುಣಮಟ್ಟದಿಂದ ಕೂಡಿದೆ. ಇಷ್ಟೊಂದು ಗುಣಮಟ್ಟದ ಸೇತುವೆ ಈಗಿನ ಕಾಲದಲ್ಲಿ ನಿರ್ಮಿಸಲು ಅಸಾಧ್ಯ. ಎಷ್ಟೋ ಸೇತುವೆಗಳು ಕಟ್ಟಿದ ಕೆಲ ವರ್ಷಗಳ ಬಳಿಕ ಬಿದ್ದಿರುವುದು ನೋಡಿದ್ದೇವೆ. ಹೀಗಾಗಿ ಶತಮಾನದ ಹಳೆಯ ಸೇತುವೆ ಉಳಿಸಿ ಕೊಳ್ಳಲು ಜಿಲ್ಲಾಡಳಿತ ಮುಂದಾಗಬೇಕಿದೆ.
ಉಮೇಶ್ ಕೆ. ಮುದ್ನಾಳ ಸಾಮಾಜಿಕ ಹೋರಾಟಗಾರ







