ಯಾದಗಿರಿ | ಜೂ.14 ರಂದು 440.63 ಕೋಟಿ ರೂ. ವೆಚ್ಚದ ಆರೋಗ್ಯ ಅವಿಷ್ಕಾರ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ
ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಭರದ ಸಿದ್ಧತೆ : ಶಾಸಕ ಡಾ.ಅಜಯ್ ಸಿಂಗ್

ಯಾದಗಿರಿ : ಕಲಬುರಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ವಿಜಯನಗರ ಸೇರಿದಂತೆ 7 ಜಿಲ್ಲೆಗಳಲ್ಲಿನ ಆರೋಗ್ಯ ರಂಗದಲ್ಲಿ ಮೂಲ ಸವಲತ್ತು ಅಭಿವೃದ್ಧಿಗೆ ಮುಂದಾಗಿರುವ ಕೆಕೆಆರ್‌ಡಿಬಿ ಈ ಭಾಗದ 1.12 ಕೋಟಿ ಜನಸಂಖ್ಯೆಯ ಪ್ರಯೋಜನಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಸಹಯೋಗದಲ್ಲಿ 440.63 ಕೋಟಿ ರೂ. ವೆಚ್ಚದಲ್ಲಿ ಆರೋಗ್ಯ ಆವಿಷ್ಕಾರ ಯೋಜನೆ ರೂಪಿಸಿ ಜಾರಿಗೆ ತರುತ್ತಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ, ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ತಿಳಿಸಿದ್ದಾರೆ.
ಡಾ.ಅಜಯ್ ಸಿಂಗ್ ಅವರು ಬೆಂಗಳೂರಿನಿಂದಲೇ ವಿಡಿಯೋ ಸಂವಾದದಲ್ಲಿ ಮಾಧ್ಯಮವದವರಿಗೆ ಈ ಮಹತ್ವದ ಮಾಹಿತಿ ನೀಡಿದ್ದಾರೆ.
ಜೂ.14 ರ ಶುಕ್ರವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯಸಭೆ ವಿಪಕ್ಷ ನಾಯಕರಾದ ಡಾ.ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್, ದಿನೇಶ ಗುಂಡೂರಾವ್, ಶರಣಬಸಪ್ಪ ದರ್ಶನಾಪೂರ, ಈಶ್ವರ ಖಂಡ್ರೆ, ಸುಧಾಕರ್ ಸೇರಿದಂತೆ ಅನೇಕರು ಯಾದಗಿರಿ ಆರೋಗ್ಯ ಅವಿಷ್ಕಾರ ಪ್ರಾರಂಭೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆಂದು ಹೇಳಿದ್ದಾರೆ.
ಜೂ.13 ರಂದು ಯಾದಗಿರಿಗೆ ಅಜಯ್ ಸಿಂಗ್, ದಿನೇಶ್ ಗುಂಡೂರಾವ್ ಭೇಟಿ :
ಜೂ.13 ರಂದು ಯಾದಗಿರಿಗೆ ಸಚಿವ ದಿನೇಶ ಗುಂಡೂರಾವ್ ಜೊತೆ ಭೇಟಿ ನೀಡುತ್ತಿರೋದಾಗಿ ಹೇಳಿರುವ ಡಾ.ಅಜಯ್ ಸಿಂಗ್ ಈಗಾಗಲೇ ಸಣ್ಣ ಕೈಗಾರಿಕೆ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರ ನೇತೃತ್ವದಲ್ಲಿ ಸಿದ್ಧತೆಗಳು ಜಿಲ್ಲಾ ಕ್ರೀಡಾಂಗಣದಲ್ಲಿ ಸಾಗಿವೆ. ಸಚಿವರೇ ಖುದ್ದು ಮುತುವರ್ಜಿ ತೋರಿಸಿ ಸಕಲ ತಯ್ಯಾರಿಯಲ್ಲಿದ್ದಾರೆಂದು ಡಾ.ಅಜಯ್ ಸಿಂಗ್ ಹೇಳಿದ್ದಾರೆ.
ಕಲಬುರಗಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಆರೋಗ್ಯ ರಂಗಕ್ಕೆ 800 ಕೋಟಿ ರೂ. ವೆಚ್ಚ ಮಾಡುವ ನಿರ್ಧಾರವಾಗಿತ್ತು. ಈ ಪೈಕಿ ಮೊದಲ ಹಂತದಲ್ಲಿ 440.63 ಕೋಟಿ ರೂ. ಹಣವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವೆಚ್ಚ ಮಾಡಲಾಗುತ್ತಿದೆ. ಈ ಹಣದಲ್ಲಿ 220 ಕೋಟಿ ರೂ. ಗೂ ಹೆಚ್ಚು ಕೆಕೆಆರ್‌ಡಿಬಿ ಪಾಲಿದೆ ಎಂದು ಡಾ.ಅಜಯ್ ಸಿಂಗ್ ಮಾಹಿತಿ ನೀಡಿದರು.
ಆರೋಗ್ಯ ಅವಿಷ್ಕಾರದಲ್ಲಿ ಕಲ್ಯಾಣ ನಾಡಲ್ಲಿ 1200 ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ, 6 ಸಮುದಾಯ ಆರೋಗ್ಯ ಕೇಂದ್ರ ಸ್ಥಾಪನೆ, 1 ನಗರ ಆರೋಗ್ಯ ಕೇಂದ್ರಕ್ಕೂ ಚಾಲನೆ, 14 ಸಿಎಚ್‌ಸಿಗಳನ್ನು 100 ಹಾಸಿಗೆಗೆ ಮೇಲ್ದರ್ಜೆಗೆ ಏರಿಸುವುದು, 3 ಸಿಎಚ್‌ಸಿಗಳನ್ನು 100 ರಿಂದ 1500 ಹಾಸಿಗೆಗೆ ಮೇಲ್ದರ್ಜೆಗೇರಿಸುವುದು, 30 ಹಾಸಿಗೆ 3 ಸಿಎಚ್‌ಸಿಗಳನ್ನು 150 ಹಾಸಿಗೆಗೆ ಹೆಚ್ಚಿಸುವುದು, 2 ಪಿಎಚ್‌ಸಿಗಳನ್ನು 100 ಹಾಸಿಗೆಗೆ ಮೇಲ್ದರ್ಜೆಗೆ ಏರಿಸುವ ಕೆಲಸ ನಡೆಯಲಿವೆ ಎಂದರು.
ಕರ್ನಾಟಕದಲ್ಲಿ ನಮ್ಮ ಸರ್ಕಾರ ಬಂದ ಆಡಳಿತಕ್ಕೆ ನಂತರ ನುಡಿದಂತೆ ನಡೆಯುತ್ತಿದ್ದೇವೆ. ಕಲ್ಯಾಣ ಭಾಗದಲ್ಲಂತೂ ಕೆಕೆಆರ್‌ಡಿಬಿ ಜನಾರೋಗ್ಯಕ್ಕಾಗಿ ಹೆಚ್ಚಿನ ಕಾಳಜಿ ತೋರಿ ಯೋಜನೆ ರೂಪಿಸುತ್ತಿದೆ. ಕ್ಯಾಬಿನೆಟ್ ನಿರ್ಣಯದ 800 ಕೋಟಿ ರೂ. ಪೈಕಿ ಮಂಡಳಿಯೇ ಮೊದಲ ಹಂತದಲ್ಲಿ 440 ಕೋಟಿ ರೂ. ಯೋಜನೆಗೆ ಚಾಲನೆ ನೀಡುತ್ತಿರೋದು ಐತಿಹಾಸಿಕ ಸಂಗತಿ. ಅಕ್ಷರ ಅವಿಷ್ಕಾರ, ಅರಣ್ಯ ಅವಿಷ್ಕಾರ, ಕೌಶಲ್ಯ ಅವಿಷ್ಕಾರದಡಿಯಲ್ಲಿ ಮಂಡಳಿ ಅದಾಗಲೇ ಹೆಚ್ಚಿನ ಕೆಲಸಗಳನ್ನು ಮಾಡುತ್ತಿದೆ.
ಡಾ.ಅಜಯ್ ಧರ್ಮಸಿಂಗ್, ಅಧ್ಯಕ್ಷರು, ಕೆಕೆಆರ್‌ಡಿಬಿ, ಕಲಬುರಗಿ







