ಯಾದಗಿರಿ | ಕುಡಿಯುವ ನೀರಿನ ಸಮಸ್ಯೆಯ ನಿವಾರಣೆಗೆ ಬದ್ಧ : ಶಾಸಕ ಶರಣಗೌಡ ಕಂದಕೂರ

ಯಾದಗಿರಿ: ಗುರುಮಠಕಲ್ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಯ ನಿವಾರಣೆಗೆ ನಾನು ಬದ್ಧನಾಗಿದ್ದೇನೆ ಎಂದು ಗುರಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.
ಗುರುಮಠಕಲ್ ಪಟ್ಟಣದಲ್ಲಿ ನಗರಾಭಿವೃದ್ಧಿ ಇಲಾಖೆ ಹಾಗೂ ಯಾದಗಿರಿ ಜಿಲ್ಲಾಡಳಿತ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬೆಂಗಳೂರು ಮತ್ತು ಗುರುಮಠಕಲ್ ಪುರಸಭೆ ಸಂಯುಕ್ತಾಶ್ರಯದಲ್ಲಿ ಗುರುಮಠಕಲ್ ಪಟ್ಟಣಕ್ಕೆ ಭೀಮಾನದಿ ಮೂಲದಿಂದ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯ ಅಂದಾಜು ಮೊತ್ತ 2,475 ಲಕ್ಷ ರೂ.ಗಳ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ನೀರು ಸರಬರಾಜು ಯೋಜನೆಗೆ ಕೇಂದ್ರ ಸರ್ಕಾರ ಶೇ.50ರಷ್ಟು ಅನುದಾನ, ರಾಜ್ಯ ಸರ್ಕಾರ ಶೇ.40ರಷ್ಟು ಅನುದಾನ, ಗುರುಮಠಕಲ್ ಪುರಸಭೆ ಶೇ.10ರಷ್ಟು ಅನುದಾನದಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಜನರಿಗೆ ಶುದ್ಧ ಕುಡಿಯುವ ನೀರಿನ ಜೊತೆಗೆ ನೀರಿನ ಸಮಸ್ಯೆ ನಿವಾರಿಸುವಲ್ಲಿ ಇದು ಸದುಪಯೋಗವಾಗಲಿದೆ ಎಂದು ಹೇಳಿದರು.
ಈ ಯೋಜನೆ ಅನುಷ್ಟಾನಕ್ಕಾಗಿ ಪುರಸಭೆ ಅಧಿಕಾರಿಗಳು ಹಣ ಸಾಕಾಗುವುದಿಲ್ಲ ಇನ್ನೂ ಹೆಚ್ಚುವರಿಯಾಗಿ 25 ಕೋಟಿ ರೂ. ಅನುದಾನ ಕೊಡಿಸಬೇಕೆಂದು ಮನವಿ ಮಾಡಿದ ಪ್ರಯುಕ್ತ ನೀರಾವರಿ ಸಚಿವರಾದ ಸುರೇಶ ಭೈರತಿ ಅವರಿಗೆ ನಾನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಆ ಅನುದಾನವನ್ನು ಕೂಡ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಮುಂದಿನ 30 ವರ್ಷಗಳವರೆಗೆ ಈ ಯೋಜನೆಯು ಜನರಿಗೆ ಉಪಯೋಗವಾಗಲಿ ಎನ್ನುವ ಉದ್ದೇಶದಿಂದ ಕೆಲಸ ಅತ್ಯುತ್ತಮ ಗುಣಮಟ್ಟದಿಂದ ಕೆಲಸ ನಡೆಯಬೇಕು, ಯಾವುದೇ ಕಾರಣಕ್ಕೆ ಕೆಲಸ ವಿಳಂಭವಾಗಬಾರದು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಗುರುಮಠಕಲ್‌ನಲ್ಲಿ 50 ಬೆಡ್ ಹಾಸಿಗೆ ಆಸ್ಪತ್ರೆಗೆ ಮುಖ್ಯಮಂತ್ರಿಗಳು ಯಾದಗಿರಿಯಲ್ಲಿ ನಡೆದ ಆರೋಗ್ಯ ಆವಿಷ್ಕಾರ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ್ದಾರೆ, ಇನ್ನೂ ರಿಂಗ್ ರೋಡ್‌ಗೆ ಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರಿಂದ 25 ಲಕ್ಷ ರೂ. ವೆಚ್ಚದಲ್ಲಿ ಸರ್ವೇ ಫಿಕ್ಸ್ ಮಾಡಿದ್ದಾರೆ, ಬೈಪಾಸ್ ರಸ್ತೆ ಕೊಡಲು ತಮ್ಮ ಅವಧಿಯಲ್ಲಿ ನೀಡುವುದಾಗಿ ಸಚಿವರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಪುರಸಭೆ ಅಧ್ಯಕ್ಷೆ ಜಯಶ್ರೀ ಪೋ.ಪಾಟೀಲ್, ಉಪಾಧ್ಯಕ್ಷೆ ರೇಣುಕಾ ಪಡಿಗೆ, ಕಲಬುರಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ನರಸಿಂಹರಡ್ಡಿ ಎನ್, ಯಾದಗಿರಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಅಶೋಕ ಕುಮಾರ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಪುರಸಭೆ ಕಿ.ಅಭಿಯಂತರರು ಅಬ್ದುಲ್ ಅಲೀಮ್, ತಹಸೀಲ್ದಾರ ಶಾಂತಗೌಡ ಬಿರದಾರ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಪಾಟೀಲ, ಸಿಡಿಪಿಓ ಶರಣಬಸಪ್ಪ, ಪಿಐ ವೀರಣ್ಣ ಹೊಸಮನಿ, ಪ್ರಕಾಶ ನಿರೆಟಿ, ಆಶಣ್ಣ ಬುದ್ದ, ಅಶೋಕ ಕಲಾಲ, ಅನಂತಪ್ಪ ಮುರುಡಿ, ಶರಣು ಆವಂಟಿ, ನವಾಜ್‌ರಡ್ಡಿ, ನರ್ಮದಾ ಆವಂದಪೂರ, ಚಂದುಲಾಲ್ ಚೌದ್ರಿ, ಅಂಬಾದಾಸ ಚಿದ್ರಿ, ಬಾಲಪ್ಪ ದಾಸರಿ, ಬಸಣ್ಣ ದೇವರಹಳ್ಳಿ, ಸಿರಾಜ್ ಚಿಂತಗುಂಟಾ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಕಾರ್ಯಕರ್ತರು ಇದ್ದರು.
ಶೀಘ್ರದಲ್ಲಿ ಪ್ರಜಾಸೌಧ ನಿರ್ಮಾಣ :
ನಮ್ಮ ತಂದೆಯವರ ಅವಧಿಯಿಂದ ಇಲ್ಲಿಯವರೆಗೆ ಪ್ರಜಾಸೌಧ ನಿರ್ಮಾಣ ಮಾಡಲು ಇಡಿ ಗುರುಮಠಕಲ್ ಪಟ್ಟಣದಲ್ಲಿ ಯಾರೂ ಜಾಗ ಕೊಡಲಿಲ್ಲ, ಆದರೆ ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರು ಹೆಚ್ಚಿನ ಮುತುವರ್ಜಿವಹಿಸಿ ಹಳೆ ಪೊಲೀಸ್ ಕ್ವಾಟರಸ್ ಜಾಗದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗಿದೆ. 8.60ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಗುರುಮಠಕಲ್ ಪೊಲೀಸ್ ಸ್ಟೇಶನ್ ಪಟ್ಟಣದ ಒಳಗಡೆ ಇದೆ, ಅದನ್ನು ಹೊರಗಡೆ ಮಾಡಲು ಗೃಹ ಸಚಿವರಿಗೆ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆಗೆ ತಿಳಿಸಿದ್ದು ಶೀಘ್ರವೇ ಪೊಲೀಸ್ ಠಾಣೆ ಮತ್ತು ಪೊಲೀಸ್ ಕ್ವಾಟರಸ್ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಕಂದಾಯ ಮಂತ್ರಿ ಕೃಷ್ಣಭೈರೆಗೌಡರಿಗೆ ತಮ್ಮ ಅವಧಿಯಲ್ಲಿ ಗುರುಮಠಕಲ್‌ನಲ್ಲಿ ಸಬ್ ರಜಿಷ್ಟರ್ ಕಚೇರಿ ನಿರ್ಮಿಸುವಂತೆ ಮನವಿ ಸಲ್ಲಿಸಲಾಗಿದೆ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಗುರುಮಠಕಲ್ ಪಟ್ಟಣದಲ್ಲಿ ಶಿಕ್ಷಣ ಇಲಾಖೆಯ ಬಿಇಓ ಕಚೇರಿ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದು, ಇವೆಲ್ಲವುಗಳು ಶೀಘ್ರವೇ ನಿರ್ಮಾಣವಾಗಲಿವೆ ಎಂದು ಹೇಳಿದರು.







