Yadgiri | ಕೆಯುಡಬ್ಲ್ಯೂ ಸಂಘದ ರಾಜ್ಯಾಧ್ಯಕ್ಷರ ವಿರುದ್ಧ ನೀಡಿರುವ ದೂರು ಸತ್ಯಕ್ಕೆ ದೂರ: ಪತ್ರಕರ್ತರ ಸಂಘ

ಯಾದಗಿರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ವಿರುದ್ಧ ನೀಡಿರುವ ಸತ್ಯಕ್ಕೆ ದೂರವಾದ ದೂರನ್ನು ಮಾನ್ಯ ಮಾಡಬಾರದು ಎಂದು ಆಗ್ರಹಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಡಿವಿಜಿ ಅವರು ಸಂಸ್ಥಾಪಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 95 ವರ್ಷಗಳ ಇತಿಹಾಸವಿದ್ದು, ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕು ಘಟಕಗಳನ್ನು ಹೊಂದಿರುವ, 10 ಸಾವಿರಕ್ಕೂ ಅಧಿಕ ಸಕ್ರಿಯ ಪತ್ರಕರ್ತರನ್ನು ಸದಸ್ಯರನ್ನಾಗಿ ಹೊಂದಿರುವ ದೇಶದ ಬೃಹತ್ ಪತ್ರಕರ್ತರ ಸಂಘಟನೆಯಾಗಿದೆ ಎಂದು ತಿಳಿಸಿದರು.
ಚುನಾವಣಾ ಪ್ರಕ್ರಿಯೆ ಮೂಲಕ ಆಯ್ಕೆಯಾಗಿರುವ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ವಿರುದ್ಧ ಇತ್ತೀಚೆಗೆ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ’ ಹೆಸರಿನಲ್ಲಿ ದೂರು ನೀಡಿರುವುದು ಖಂಡನೀಯ. ಸದಸ್ಯತ್ವ ನೀಡಲು ನಿರಾಕರಿಸಲ್ಪಟ್ಟ ಕೆಲವರು ಗುಂಪು ಕಟ್ಟಿಕೊಂಡು ಸಂಘದ ವಿರುದ್ಧ ಕುತಂತ್ರ ನಡೆಸುತ್ತಿದ್ದಾರೆ. ಹೀಗಾಗಿ ಇಂತಹವರ ಆರೋಪಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.
ರಂಗಭೂಮಿ ನೆಲೆಯಿಂದ ಬೆಳೆದುಬಂದಿರುವ ಶಿವಾನಂದ ತಗಡೂರು ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿರುವುದನ್ನು ಸಹಿಸದೆ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ದೂರಿದರು. ಸಂಘವು ಕಾರ್ಮಿಕ ಕಾಯ್ದೆಯಂತೆ ಸಂಘಟನಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಕಾಲಕಾಲಕ್ಕೆ ಲೆಕ್ಕಪತ್ರ ಹಾಗೂ ವಹಿವಾಟುಗಳನ್ನು ಪಾರದರ್ಶಕವಾಗಿ ನಿರ್ವಹಿಸಲಾಗುತ್ತಿದೆ. ರಾಜ್ಯ ಸಮಿತಿ ಸಭೆಗಳು ಹಾಗೂ ಪ್ರತಿ ವರ್ಷ ಸಾಮಾನ್ಯ ಸಭೆಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದೆ ಎಂದರು.
ಶಿವಾನಂದ ತಗಡೂರು ಅವರ ಅವಧಿಯಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 1.10 ಕೋಟಿ ರೂ. ಠೇವಣಿ ಮಾಡಲಾಗಿದೆ. ಕೋವಿಡ್‌ನಿಂದ ಮೃತಪಟ್ಟ ನೂರಾರು ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ದೊರಕಿಸುವಲ್ಲಿ ತಗಡೂರು ಅವರ ಪ್ರಯತ್ನ ಮಹತ್ವದ್ದಾಗಿದೆ. ಪತ್ರಕರ್ತರ ಕುಟುಂಬಗಳ ಪರವಾಗಿ ಹೋರಾಡಿರುವ ಅವರ ಸೇವೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಸರ್ಕಾರದ ಹಲವು ಕಾರ್ಯಕ್ರಮಗಳಲ್ಲಿ ಸಹಯೋಗ ಹೊಂದಿದ್ದು, ಸರ್ಕಾರದ ಮಾನ್ಯತೆ ಪಡೆದ ಪತ್ರಕರ್ತರ ಏಕೈಕ ಸಂಘಟನೆಯಾಗಿದೆ. ನೈಜ ಪತ್ರಕರ್ತರ ಸಂಘಟನೆಯಾಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾಯಿತ ಅಧ್ಯಕ್ಷರ ವಿರುದ್ಧ ನೀಡಿರುವ ದೂರನ್ನು ಮಾನ್ಯ ಮಾಡಬಾರದು. ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡಲು ಯತ್ನಿಸುತ್ತಿರುವವರ ವಿರುದ್ಧ ಸೂಕ್ತ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್, ಹನುಮಂತ ಪಿ., ಮಹೇಶ್ ಕಲಾಲ್, ಗಣೇಶ್ ಪಾಟೀಲ್ , ಮಹೇಶ್ ಗಣೇರ್ , ನಾಗಪ್ಪ ನಾಯ್ಕಲ್, ಬಸವರಾಜ ಕರೆಗಾರ, ರಾಘವೇಂದ್ರ ಹಾರಣಗೇರಾ, ಕೆ.ಬಿ. ರಾಘವೇಂದ್ರ, ದೇವರಾಜ ನಾಯಕ, ರವಿರಾಜ ಕಂದಳ್ಳಿ, ಶರಬು ನಾಟೇಕಾರ್, ನಾಗರಾಜ ಬೀರನೂರ, ಮಾನಯ್ಯ ಗಾಳಿನೋರ, ಸುಧೀರ್ ಕೋಟೆ, ಬೀರಲಿಂಗಪ್ಪ ಕಿಲ್ಲನಕೇರಾ, ಮಲ್ಲಿಕಾಜು೯ನ, ಭೀಮಣ್ಣ ವಡವಟ್ ಇದ್ದರು.






