Yadgiri | ನದಿಗೆ ಸೇತುವೆ ನಿರ್ಮಾಣದಿಂದ ಭಕ್ತರಿಗೆ, ರೈತರಿಗೆ ಅನುಕೂಲವಾಗಲಿದೆ: ಶಾಸಕ ಚೆನ್ನಾರೆಡ್ಡಿ ತುನ್ನೂರು

ಯಾದಗಿರಿ: ಕಳೆದ ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ವಡಗೇರಾ ತಾಲ್ಲೂಕಿನ ಕೋಡಾಲ ಗ್ರಾಮದ ಹೊರವಲಯದ ಕೃಷ್ಣಾ ನದಿ ದಂಡೆಯಿಂದ ಗಡ್ಡೆ ಬಸವೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಕಿರು ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸೇತುವೆ ನಿರ್ಮಾಣದಿಂದ ಸಾವಿರಾರು ಭಕ್ತರು ಹಾಗೂ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ಕೋಡಾಲ ಗ್ರಾಮದ ಕೃಷ್ಣಾ ನದಿ ದಂಡೆಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 2024–25ನೇ ಸಾಲಿನ ಅಂಪೆಂಡಿಕ್ಸ್–ಇ 5054 ಯೋಜನೆಯಡಿ 5 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿರುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಚುನಾವಣೆ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡಿದಾಗ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಸೇತುವೆ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದ್ದರು. ಕಳೆದ ಮೂರು ವರ್ಷಗಳಿಂದ ಅಧಿಕಾರಿಗಳೊಂದಿಗೆ ನಿರಂತರ ಪ್ರಯತ್ನ ನಡೆಸಿದ ಪರಿಣಾಮ ಕಾಮಗಾರಿ ಮಂಜೂರಾಗಿದೆ. ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಂಡು ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಗಡ್ಡೆ ಬಸವೇಶ್ವರ ದೇವಸ್ಥಾನಕ್ಕೆ ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯಿದ್ದು, ಸೇತುವೆ ನಿರ್ಮಾಣದಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕೃಷ್ಣಾ ನದಿ ಈ ಭಾಗದ ರೈತರಿಗೆ ವರದಾನವಾಗಿದ್ದು, ಈ ವರ್ಷ ಬೆಳೆಗಳು ಉತ್ತಮವಾಗಿ ಬೆಳೆಯುತ್ತಿರುವುದು ಸಮಾಧಾನ ತಂದಿದೆ ಎಂದರು.
ರಾಜ್ಯ ಸರ್ಕಾರ ಮಹಿಳೆಯರ ಸ್ವಾವಲಂಬನೆ ಹಾಗೂ ಜನರ ಕಲ್ಯಾಣಕ್ಕಾಗಿ ಗೃಹಲಕ್ಷ್ಮಿ, ಉಚಿತ ಸಾರಿಗೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಪಂಚ ಗ್ಯಾರಂಟಿ ಯೋಜನೆಗಳಿಗೆ ಪ್ರತಿವರ್ಷ ಅಗತ್ಯ ಅನುದಾನ ಒದಗಿಸುವುದರ ಜೊತೆಗೆ, ವಿವಿಧ ಇಲಾಖೆಗಳ ಮೂಲಕ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೂ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು.
18 ವರ್ಷಗಳ ಮನವಿಗೆ ಸ್ಪಂದನೆ :
ಗಡ್ಡೆ ಬಸವೇಶ್ವರ ದೇವಸ್ಥಾನದ ಪೀಠಾಧಿಪತಿ ಪಂಚಮಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ದೇವಸ್ಥಾನಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಕೃಷ್ಣಾ ನದಿಯನ್ನು ದಾಟಿಯೇ ಬರಬೇಕಾಗಿತ್ತು. ಸೇತುವೆ ನಿರ್ಮಾಣಕ್ಕಾಗಿ ಕಳೆದ 18 ವರ್ಷಗಳಿಂದ ವಿವಿಧ ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಇದೀಗ ಶಾಸಕ ತುನ್ನೂರ ಅವರ ಪ್ರಯತ್ನದಿಂದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿರುವುದು ಸಂತಸದ ಸಂಗತಿ ಎಂದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸ್ಸುಗೌಡ ಬಿಳ್ಹಾರ ಮಾತನಾಡಿ, ಶಾಸಕ ತುನ್ನೂರ ಅವರು ಜನರು ಹಾಗೂ ಕಾರ್ಯಕರ್ತರಿಗೆ ಸುಲಭವಾಗಿ ಲಭ್ಯವಾಗಿ, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಕಾಮಗಾರಿಗಳಿಗೆ ಆದ್ಯತೆ ನೀಡಿ ಅನುಕೂಲ ಕಲ್ಪಿಸುತ್ತಿದ್ದಾರೆ ಎಂದರು.
350 ಅಡಿ ಉದ್ದದ ಸೇತುವೆ :
ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಮಾತನಾಡಿ, ಸೇತುವೆ 350 ಅಡಿ ಉದ್ದ, 19 ಅಡಿ ಅಗಲ ಹಾಗೂ 8 ಮೀಟರ್ ಎತ್ತರ ಹೊಂದಿರಲಿದೆ. ಕೋಡಾಲ ಗ್ರಾಮ ಹಾಗೂ ದೇವಸ್ಥಾನದ ಕಡೆಗೆ ಉತ್ತಮ ರಸ್ತೆ ನಿರ್ಮಾಣ ಮಾಡಲಾಗುವುದು. ಇದರಿಂದ ವಾಹನ ಸಂಚಾರಕ್ಕೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಶಾಸಕರು ಹಾಗೂ ಮುಖಂಡರನ್ನು ಗ್ರಾಮಸ್ಥರು ಕೋಡಾಲ ಕ್ರಾಸ್‌ನಿಂದ ಗ್ರಾಮದ ಅಗಸಿ ಬಳಿಯ ಹನುಮಾನ ದೇವಸ್ಥಾನದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತಂದರು. ಸಮಾರಂಭದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.






