Yadgiri | ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ವಿಳಂಬಕ್ಕೆ ಕಡಿವಾಣ ಹಾಕಲು ದಲಿತ ಸಂಘರ್ಷ ಸಮಿತಿ ಆಗ್ರಹ

ಯಾದಗಿರಿ: ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳು ಹಾಗೂ ಸಾಲ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು, ಸಾರ್ವಜನಿಕರು ತಿಂಗಳುಗಟ್ಟಲೆ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಯೋಜಕ ರಾಯಪ್ಪ ಸಾಲಿಮನಿ ಆರೋಪಿಸಿದ್ದಾರೆ.
ನೇರ ಸಾಲ ಸೌಲಭ್ಯ ಪಡೆಯಲು ಫಲಾನುಭವಿಗಳು ಮೂರರಿಂದ ನಾಲ್ಕು ತಿಂಗಳುಗಳವರೆಗೆ ಕಚೇರಿಗೆ ಅಲೆದಾಡಬೇಕಾಗುತ್ತಿದೆ. ಇತರ ಯೋಜನೆಗಳಲ್ಲಿಯೂ ವರ್ಷಪೂರ್ತಿ ಓಡಾಡಿದರೂ ಕೆಲಸ ಪೂರ್ಣಗೊಳ್ಳುತ್ತಿಲ್ಲ. ಅಧಿಕಾರಿಗಳು ಪರಸ್ಪರ ಹೊಣೆಗಾರಿಕೆಯನ್ನು ತಳ್ಳಿಹಾಕುತ್ತಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಅವರು ದೂರಿದರು.
ಈ ಕುರಿತು ಇಲಾಖೆಯ ವ್ಯವಸ್ಥಾಪಕರಿಗೆ ಮಾಹಿತಿ ಇದ್ದರೂ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ಸಮರ್ಪಕ ನಿಯಂತ್ರಣ ಸಾಧಿಸಲು ವಿಫಲರಾಗಿದ್ದಾರೆ. ಯಾವುದೇ ಅರ್ಜಿಯನ್ನು ಒಂದು ವಾರದೊಳಗೆ ವಿಲೇವಾರಿ ಮಾಡಿ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವ ವ್ಯವಸ್ಥೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರು ಕೂಡಲೇ ಅಧಿಕಾರಿಗಳ ಸಭೆ ಕರೆದು, ಕೆಲಸಗಳಲ್ಲಿ ವಿಳಂಬವಾಗಲು ಕಾರಣಗಳೇನು ಎಂಬುದನ್ನು ಪರಿಶೀಲಿಸಬೇಕು. ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯನ್ನು ನಿಗದಿಪಡಿಸಿ, ನಿರ್ಲಕ್ಷ್ಯ ತೋರಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಫಲಾನುಭವಿಗಳಿಗೆ ನಿಗದಿತ ಅವಧಿಯಲ್ಲಿ ಸೇವೆ ದೊರೆಯುವಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.






