ಯಾದಗಿರಿ | ಎಸ್ಪಿ ಪೃಥ್ವಿಕ್ ಶಂಕರ್ ಅವರನ್ನು ವರ್ಗಾವಣೆ ಮಾಡದಂತೆ ದಲಿತ ಸೇನೆ ಮನವಿ

ಸುರಪುರ: ಯಾದಗಿರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರನ್ನು ವರ್ಗಾವಣೆ ಮಾಡದಂತೆ ದಲಿತ ಸೇನೆ ಸಂಘಟನೆಯ ತಾಲೂಕು ಘಟಕದಿಂದ ಒತ್ತಾಯಿಸಲಾಯಿತು.
ನಗರದ ತಹಶೀಲ್ದಾರ್ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿ, ಪೃಥ್ವಿಕ್ ಶಂಕರ್ ಅವರು ಜಿಲ್ಲೆಗೆ ಬಂದ ಮೇಲೆ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ, ಮಟಕಾ, ಜೂಜು, ಕೋಳಿ ಪಂಜೆ ಸೇರಿದಂತೆ ಎಲ್ಲ ರೀತಿಯ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾರೆ. ಇದರಿಂದ ಜಿಲ್ಲೆಯ ಅಭಿವೃದ್ಧಿಗೂ ಅನುಕೂಲವಾಗಿದೆ. ಆದರೆ ಎಸ್ಪಿಯವರು ಜಿಲ್ಲೆಗೆ ಬಂದು 6 ತಿಂಗಳಲ್ಲಿಯೇ ವರ್ಗಾವಣೆ ಮಾಡುತ್ತಿರುವುದು ತುಂಬಾ ಬೇಸರದ ಸಂಗತಿಯಾಗಿದೆ. ಯಾವುದೇ ಕಾರಣಕ್ಕೂ ಎಸ್ಪಿ ಪೃಥ್ವಿಕ್ ಶಂಕರ್ ಅವರನ್ನು ವರ್ಗಾವಣೆ ಮಾಡಬಾರದು, ಒಂದು ವೇಳೆ ವರ್ಗಾವಣೆ ಮಾಡಿದಲ್ಲಿ ಸರಕಾರದ ವಿರುದ್ಧ ಜಿಲ್ಲೆಯಾದ್ಯಂತ ನಮ್ಮ ದಲಿತ ಸೇನೆ ಸಂಘಟನೆ ರಾಜ್ಯಾಧ್ಯಕ್ಷರಾದ ಹಣಮಂತ ಯಳಸಂಗಿ ಅವರ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಗೃಹ ಸಚಿವರಿಗೆ ಬರೆದ ಮನವಿ ತಹಶೀಲ್ದಾರ್ ಹುಸೇನಸಾಬ್ ಎ.ಸರಕಾವಸ್ ಅವರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕ ಅಧ್ಯಕ್ಷ ಮಹಾದೇವ ಚಲುವಾದಿ ದೇವಾಪುರ, ಜಿಲ್ಲಾ ಉಪಾಧ್ಯಕ್ಷ ಜುಮ್ಮಣ್ಣ ಕಟ್ಟಿಮನಿ, ಪರಶುರಾಮ ಕಟ್ಟಿಮನಿ, ಶ್ರವಣಕುಮಾರ ಕಟ್ಟಿಮನಿ, ಸಂತೋಷ ಜೈನಾಪುರ, ಹುಸನಪ್ಪ ದೇವಾಪುರ, ಲೋಕೇಶ ವಸ್ತಾರಿ, ಮೌನೇಶ ಪತ್ತೆಪೂರ, ಭೀಮರಾಯ ಕಟ್ಟಿಮನಿ, ಪರಶುರಾಮ ಕಟ್ಟಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.