Yadgiri | 371(ಜೆ) ಸಮರ್ಪಕ ಜಾರಿಗೆ ಆಗ್ರಹ: ಸೆ.17ರಂದು ಕಲಬುರಗಿಯಲ್ಲಿ ಸಂಕಲ್ಪ ಸಮಾವೇಶ
ಸಮಾವೇಶದಲ್ಲಿ 2 ಸಾವಿರ ಜನರು ಭಾಗವಹಿಸುವ ನಿರೀಕ್ಷೆ: ಮಲ್ಲಯ್ಯ ಕಮತಗಿ

ಯಾದಗಿರಿ: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮುಂದುವರಿದಿರುವ ಪ್ರಾದೇಶಿಕ ಅಸಮತೋಲನ ನಿವಾರಣೆ ಹಾಗೂ ಸಂವಿಧಾನದ ಕಲಂ 371(ಜೆ) ಸಮರ್ಪಕ ಜಾರಿಗೆ ಆಗ್ರಹಿಸಿ ಸೆಪ್ಟೆಂಬರ್ 17ರಂದು ಕಲಬುರಗಿಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣಾ ಸಂಕಲ್ಪ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ ಕಮತಗಿ ತಿಳಿಸಿದರು.
ಭಾನುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿ ಅನುದಾನ ವ್ಯಯವಾಗಿದ್ದರೂ ಶಿಕ್ಷಣ, ಆರೋಗ್ಯ, ಉದ್ಯೋಗ, ನೀರಾವರಿ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಡೇಚೂರು–ಬಾಡಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ ಕೆಲವು ರಾಸಾಯನಿಕ ಕಾರ್ಖಾನೆಗಳಿಂದ ತ್ಯಾಜ್ಯ ನೀರು ಹೊರಹರಿಯುತ್ತಿದ್ದು, ಇದರಿಂದ ಜನರು ಹಾಗೂ ಜಾನುವಾರುಗಳ ಆರೋಗ್ಯಕ್ಕೆ ಅಪಾಯ ಎದುರಾಗುವ ಆತಂಕವಿದೆ. ಅಂತರ್ಜಲದ ಗುಣಮಟ್ಟವೂ ಹದಗೆಡುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಯಾದಗಿರಿ ನಗರದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ವಾಸಿಸುತ್ತಿದ್ದು, ನಗರಸಭೆಯಿಂದ ಪೂರೈಕೆಯಾಗುತ್ತಿರುವ ನೀರಿನ ಗುಣಮಟ್ಟದ ಬಗ್ಗೆ ಸಾರ್ವಜನಿಕರಲ್ಲಿ ಆತಂಕವಿದೆ. ಕಲುಷಿತ ನೀರಿನಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಭೀಮಾ ನದಿಯಿಂದ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಸೆಪ್ಟೆಂಬರ್ 17ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಲಬುರಗಿಗೆ ಆಗಮಿಸುವ ಹಿನ್ನೆಲೆಯಲ್ಲಿ ಸಮಿತಿಯ ನಿಯೋಗ ಅವರನ್ನು ಭೇಟಿ ಮಾಡಿ ಕಲ್ಯಾಣ ಕರ್ನಾಟಕದ ವಾಸ್ತವಿಕ ಪರಿಸ್ಥಿತಿ ಹಾಗೂ ವಿವಿಧ ಲೋಪದೋಷಗಳ ಬಗ್ಗೆ ಮನವಿ ಸಲ್ಲಿಸಲಿದೆ ಎಂದು ತಿಳಿಸಿದರು.
371(ಜೆ) ಜಾರಿಯಾದ ಬಳಿಕ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗಿದ್ದು, ಪ್ರಾದೇಶಿಕ ಅಸಮತೋಲನ ನಿವಾರಣೆ ಅದರ ಪ್ರಮುಖ ಉದ್ದೇಶವಾಗಿದೆ. ಆದರೆ ಮಂಡಳಿಯ ಅನುದಾನವನ್ನು ವೈಜ್ಞಾನಿಕವಾಗಿ ಬಳಸದೆ ಕೇವಲ ಕಾಮಗಾರಿಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗದಂತಹ ಮಾನವ ಅಭಿವೃದ್ಧಿ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ಕೊರತೆ, ವೈದ್ಯಕೀಯ ಸಿಬ್ಬಂದಿ ಅಭಾವ, ವಿಶ್ವವಿದ್ಯಾಲಯಗಳಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕೊರತೆ ಹಾಗೂ ನೀರಾವರಿ ಯೋಜನೆಗಳ ವಿಳಂಬದಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಯುವಜನರು, ರೈತರು, ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರು ಒಗ್ಗೂಡಿ ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು.
ಕಲಬುರಗಿಯ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ನಡೆಯಲಿರುವ ಸಂಕಲ್ಪ ಸಮಾವೇಶದಲ್ಲಿ ಸುಮಾರು 2 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಲ್ಲಯ್ಯ ಕಮತಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಿಪ್ಪಣ್ಣ ಸುಕಲ್ ಸುರಪುರ, ಅಶೋಕ್ ವಾಟಕರ್, ಸಿದ್ದಲಿಂಗಪ್ಪ ನಾಯಕ್ ಬೆಳಗುಂದಿ, ಅಹ್ಮದ್ ಪಠಾಣ್, ಯಲಪ್ಪ ಮಳಿಕೇರಿ, ಗಿರಿಯಪ್ಪಗೌಡ ಬಾಣತಿಹಾಳ ಶಹಾಪುರ, ಸೈಯದ್ ಕಾದ್ರಿ, ಸಿದ್ದಲಿಂಗ ರೆಡ್ಡಿ ಭೀಮನಹಳ್ಳಿ, ಶರಣಪ್ಪ ಜಾಕನಹಳ್ಳಿ, ದೊಡ್ಡಯ್ಯ ನಾಯಕ ಹಳಿಗೇರ, ಮಲ್ಲಯ್ಯ ಮಗ್ಗ, ಚಂದ್ರಪ್ಪ ನಾಯಕ್, ಹಫೀಜ್ ಪಟೇಲ್, ಅಬ್ದುಲ್ ಮತೀನ್, ವೈಜನಾಥ ಪಾಟೀಲ್ ಹತ್ತಿಕುಣಿ ಸೇರಿದಂತೆ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.






