Yadgiri | ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಡಿಎಚ್ಒ ಕಚೇರಿ ಸಿಬ್ಬಂದಿ

ಶ್ರೀಕಾಂತ್ ಭಾವಿಮಣಿ
ಯಾದಗಿರಿ: ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್ಒ) ಕಚೇರಿಯ ಸಿಬ್ಬಂದಿಯೊಬ್ಬರು ರಾಷ್ಟ್ರೀಯ ಗುಣಮಟ್ಟ ಖಾತ್ರಿ ಕಾರ್ಯಕ್ರಮದ ಪ್ರೋತ್ಸಾಹಧನ ಬಿಡುಗಡೆಗೆ 20 ಸಾವಿರ ರೂ. ಲಂಚವನ್ನು ಫೋನ್ಪೇ ಮೂಲಕ ಸ್ವೀಕರಿಸುತ್ತಿದ್ದ ವೇಳೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬಲೆ ಬೀಸಿ ಬಂಧಿಸಿದ್ದಾರೆ.
ಆಳಂದ ನಿವಾಸಿ ಪರಮೇಶ್ವರ ಜಮಾದಾರ್ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 7(ಎ) ಅಡಿ ಅಪರಾಧ ಸಂಖ್ಯೆ 07/2026 ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದರು.
ಡಿಎಚ್ಒ ಕಚೇರಿಯ ಆಡಳಿತಾತ್ಮಕ-ಕಮ್-ಪ್ರೋಗ್ರಾಂ ಸಹಾಯಕರಾಗಿರುವ ಶ್ರೀಕಾಂತ್ ಭಾವಿಮಣಿ ಅವರು ಜಿಲ್ಲಾ ಗುಣಮಟ್ಟ ಭರವಸೆ ಘಟಕಕ್ಕೆ ಬಿಡುಗಡೆಯಾಗಿದ್ದ 2,39,750 ರೂ. ಮೊತ್ತದ ನಿಧಿಗೆ ಸಂಬಂಧಿಸಿದ ಕಡತದ ಪ್ರಕ್ರಿಯೆ ಪೂರ್ಣಗೊಳಿಸಲು 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರಿನ ಪರಿಶೀಲನೆಯ ಬಳಿಕ ಪೂರ್ವನಿಯೋಜಿತ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಆರೋಪಿಯು ಫೋನ್ಪೇ ಮೂಲಕ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ರೆಡ್ಹ್ಯಾಂಡ್ ಆಗಿ ವಶಕ್ಕೆ ಪಡೆದರು.
ಲೋಕಾಯುಕ್ತ ಡಿವೈಎಸ್ಪಿ ಜೆ.ಎಚ್. ಇನಾಮದಾರ್ ಅವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಸಿದ್ರಾಯ ಬಳೂರಗಿ ಹಾಗೂ ಯಾದಗಿರಿ ಲೋಕಾಯುಕ್ತ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಲೋಕಾಯುಕ್ತ ಎಸ್ಪಿ ಸಿದ್ದರಾಜು ಸಿ. ಅವರ ಮಾರ್ಗದರ್ಶನದಲ್ಲಿ ನಡೆದ ದಾಳಿಯ ಬಳಿಕ ಆರೋಪಿಯನ್ನು ವಶಕ್ಕೆ ಪಡೆದು, ಪ್ರಕರಣದ ಕುರಿತು ಮುಂದಿನ ತನಿಖೆ ಕೈಗೊಳ್ಳಲಾಗಿದೆ.






