Yadgiri | ಬರ ಅಧ್ಯಯನ: ಶಹಾಪುರದಲ್ಲಿ ಕೇಂದ್ರ ತಂಡದಿಂದ ಬೆಳೆ ಹಾನಿ ಪರಿಶೀಲನೆ

ಯಾದಗಿರಿ: ಖಾರಿಫ್ ಹಂಗಾಮಿನ ಬರ ಪರಿಸ್ಥಿತಿ ಅಧ್ಯಯನಕ್ಕೆ ಆಗಮಿಸಿದ್ದ ಕೇಂದ್ರದ ನಿರ್ದೇಶಕ ಡಾ. ಮನ್ ಸಿಂಗ್ ನೇತೃತ್ವದ ತಂಡವು ಭಾನುವಾರ ಶಹಾಪುರ ತಾಲೂಕಿನ ಗುಂಡಳ್ಳಿ, ದೊರನಹಳ್ಳಿ, ಬಿದರಣಿ, ಮದ್ದರಕಿ, ಮುಡಬೂಳ ಸೇರಿದಂತೆ ವಿವಿಧ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿಯ ಕುರಿತು ಪರಿಶೀಲನೆ ನಡೆಸಿತು.
ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳಾದ ಡಾ. ಮನ್ ಸಿಂಗ್, ಅಧೀನ ಕಾರ್ಯದರ್ಶಿಗಳಾದ ಪಾರ್ಥಪಾಲ್ ಹಾಗೂ ರಾಕೇಶ್ ಕುಮಾರ್ ಅವರನ್ನೊಳಗೊಂಡ ತಂಡವು ಬೆಳಿಗ್ಗೆ ಯಾದಗಿರಿಯಿಂದ ನೇರವಾಗಿ ಶಹಾಪುರ ರಸ್ತೆಯ ಗುಂಡಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ನಿಂಗವ್ವ ಅವರಿಗೆ ಸೇರಿದ ಹತ್ತಿ ಹೊಲಕ್ಕೆ ಭೇಟಿ ನೀಡಿತು. ಅಲ್ಲಿ ಒಣಗಿ ನಿಂತಿದ್ದ ಹತ್ತಿ ಬೆಳೆಯನ್ನು ಪರಿಶೀಲಿಸಿದ ಅಧಿಕಾರಿಗಳು, ಹೊಲದ ಮಾಲೀಕರ ಪುತ್ರ ಶರಣಪ್ಪ ಹಾಗೂ ಇತರ ರೈತರಿಂದ ಬೆಳೆ ಹಾನಿಯ ಕುರಿತು ಮಾಹಿತಿ ಪಡೆದರು.
ಒಂದೂವರೆ ಎಕರೆ ಜಮೀನಿನಲ್ಲಿ ಸುಮಾರು 30 ಸಾವಿರ ರೂ. ಖರ್ಚು ಮಾಡಿ ಹತ್ತಿ ಬಿತ್ತನೆ ಮಾಡಲಾಗಿತ್ತು. ಎಕರೆಗೆ ಸುಮಾರು 10 ಕ್ವಿಂಟಾಲ್ ಹತ್ತಿ ಬೆಳೆಯಬೇಕಾಗಿತ್ತು. ಆದರೆ ಮಳೆಯ ಕೊರತೆಯಿಂದ ಕೇವಲ ಒಂದರಿಂದ ಒಂದೂವರೆ ಕ್ವಿಂಟಾಲ್ ಮಾತ್ರ ಹತ್ತಿ ಬೆಳೆದಿದ್ದು, ಅದೇ ಹೆಚ್ಚಾಗಿದೆ. ಇಡೀ ಗ್ರಾಮದ ಹತ್ತಿ ಬೆಳೆ ಒಣಗಿ ಹೋಗಿದ್ದು, ರೈತರ ಸ್ಥಿತಿ ಚಿಂತಾಜನಕವಾಗಿದೆ ಎಂದು ರೈತ ಶರಣಪ್ಪ ತಂಡಕ್ಕೆ ವಿವರಿಸಿದರು. ಸ್ಥಳದಲ್ಲಿದ್ದ ರೈತರಾದ ದೇವೇಂದ್ರಪ್ಪ, ಮೊಹಮ್ಮದ್ ಖಾದ್ರಿ, ಸಿದ್ದಣ್ಣ, ಕಾಶಿಪತಿ ಹಾಗೂ ರಮೇಶ ಚವ್ಹಾಣ ಅವರು ಸಹ ಬೆಳೆ ಹಾನಿಯ ಕುರಿತು ಮಾಹಿತಿ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗುರ ಅವರು ಹತ್ತಿ ಬೆಳೆಯ ಪರಿಸ್ಥಿತಿ ಕುರಿತು ತಂಡಕ್ಕೆ ಸಮಗ್ರ ಮಾಹಿತಿ ನೀಡಿದರು. ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು ಸಹ ಅಗತ್ಯ ಮಾಹಿತಿಯನ್ನು ಒದಗಿಸಿದರು.
ನಂತರ ತಂಡವು ದೊರನಹಳ್ಳಿ ಗ್ರಾಮದ ಹೊಲಗಳಿಗೆ ಭೇಟಿ ನೀಡಿ ರೈತ ನಿಂಗಣ್ಣ ಮಲಗೊಂಡ ಅವರ ಜಮೀನಿನಲ್ಲಿ ಒಣಗಿ ನಿಂತಿದ್ದ ಹತ್ತಿ, ತೊಗರಿ ಸೇರಿದಂತೆ ವಿವಿಧ ಬೆಳೆಗಳನ್ನು ಪರಿಶೀಲಿಸಿತು. ಈ ಸಂದರ್ಭದಲ್ಲಿ ರೈತರಾದ ಕಲ್ಲಪ್ಪ ಹಾಗೂ ಹಣಮಂತಪ್ಪ ದೊರನಳ್ಳಿ ಅವರು ಮಳೆಯಿಲ್ಲದೇ ಬಿತ್ತಿದ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು, ಇದರಿಂದ ರೈತರ ಸ್ಥಿತಿ ಹದಗೆಟ್ಟಿದೆ ಎಂದು ತಿಳಿಸಿದರು. 1972ರಲ್ಲಿ ತಲೆದೋರಿದ್ದ ಬರಗಾಲದ ರೀತಿಯೇ ಈ ಬಾರಿಯೂ ಬರ ಪರಿಸ್ಥಿತಿ ಎದುರಾಗಿದೆ ಎಂಬುದು ಹಿರಿಯ ರೈತರ ಅಭಿಪ್ರಾಯವಾಗಿದೆ ಎಂದು ಅವರು ತಂಡಕ್ಕೆ ತಿಳಿಸಿದರು.
ರೈತ ಹಯ್ಯಳಪ್ಪ ದೊಡಮನಿ ಅವರು ಮಳೆ ಕೊರತೆ ಹಾಗೂ ತೀವ್ರ ನೀರಿನ ಅಭಾವದಿಂದ ಹತ್ತಿ ಮತ್ತು ತೊಗರಿ ಬೆಳೆ ನಾಶವಾಗಿದೆ ಎಂದು ತಿಳಿಸಿದರು. ರೈತರಾದ ಸಿದ್ದಪ್ಪ ಹಾಗೂ ಮಲ್ಲಿಕಾರ್ಜುನ ಬಡಿಗೇರ್ ಅವರೂ ಬೆಳೆ ಹಾನಿಯ ಕುರಿತು ತಂಡಕ್ಕೆ ಮಾಹಿತಿ ನೀಡಿದರು.
ತೀವ್ರ ಮಳೆ ಕೊರತೆಯಿಂದ ಉಂಟಾಗಿರುವ ಪರಿಸ್ಥಿತಿ, ಕೃಷಿ ಚಟುವಟಿಕೆಗಳ ಮೇಲಾದ ಪರಿಣಾಮ, ವಿವಿಧ ಬೆಳೆಗಳ ಸ್ಥಿತಿ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕೇಂದ್ರ ತಂಡವು ಮಾಹಿತಿ ಸಂಗ್ರಹಿಸಿತು. ಬಳಿಕ ಬಿದರಣಿ ಹಾಗೂ ಮುಡಬೂಳ ಗ್ರಾಮಗಳಿಗೆ ಭೇಟಿ ನೀಡಿದ ತಂಡವು ಬಿ.ಟಿ. ಹತ್ತಿ ಬೆಳೆ ನಾಶ, ತೊಗರಿ ಬೆಳೆ ಹಾನಿ ಹಾಗೂ ನೀರು ಸರಬರಾಜು ಸಮಸ್ಯೆಯಿರುವ ಸ್ಥಳಗಳನ್ನು ಪರಿಶೀಲಿಸಿತು. ನಂತರ ತಂಡವು ದೇವದುರ್ಗದತ್ತ ಪ್ರಯಾಣ ಬೆಳೆಸಿತು.
ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ, ಸಹಾಯಕ ಆಯುಕ್ತ ಶ್ರೀಧರ್ ಗೋಟೂರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಘವೇಂದ್ರ, ಶಹಾಪುರ ತಹಶೀಲ್ದಾರ್, ತಾಲ್ಲೂಕು ಪಂಚಾಯತ್ ಇಒ, ಪಶುಪಾಲನೆ, ತೋಟಗಾರಿಕೆ, ಆರ್‌ಡಿಪಿಆರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಯಾದಗಿರಿ ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ತಂಡವು ಬೆಳೆ ಹಾನಿ ಪರಿಶೀಲನೆಗೂ ಮುನ್ನ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಮಾಹಿತಿಯನ್ನು ಪಡೆದುಕೊಂಡಿತು. ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿರುವ ಕೇಂದ್ರದ ಮೂರು ಬರ ಅಧ್ಯಯನ ತಂಡಗಳು ಬೆಳೆ ಹಾನಿ ಹಾಗೂ ರೈತರ ಸಂಕಷ್ಟದ ಕುರಿತು ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿವೆ.






