Yadgiri | ಎಸೆಸೆಲ್ಸಿ ಫಲಿತಾಂಶದಲ್ಲಿ ಯಾವೊಬ್ಬ ಹೆಣ್ಣು ಮಗುವೂ ಅನುತ್ತೀರ್ಣವಾಗದಂತೆ ಕ್ರಮವಹಿಸಿ: ಡಿಸಿ ರಾಹುಲ್ ಪಾಂಡ್ವೆ

ಯಾದಗಿರಿ: ಮುಂಬರುವ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಯಾವೊಬ್ಬ ಹೆಣ್ಣು ಮಗುವೂ ಅನುತ್ತೀರ್ಣವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ನಡೆದ 2026-27ನೇ ಸಾಲಿನ ಪರೀಕ್ಷಾ ಫಲಿತಾಂಶ ಸುಧಾರಣೆ ಹಾಗೂ ಸಂಕಲನಾತ್ಮಕ ಮೌಲ್ಯಮಾಪನ ಪರೀಕ್ಷೆ (ಎಸ್‌ಎ-1) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹದಂತಹ ಗಂಭೀರ ಸಮಸ್ಯೆಯಿದೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹೆಣ್ಣು ಮಗುವಿನ ಭವಿಷ್ಯ ಡೋಲಾಯಮಾನ ಸ್ಥಿತಿಗೆ ತಲುಪುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿಕ್ಷಕರು ವಿಶೇಷ ನಿಗಾ ವಹಿಸಿ, ಮುಂಬರುವ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ದಾಖಲಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಸೂಕ್ತ ಯೋಜನೆ ರೂಪಿಸಬೇಕು. ಹಿಂದಿನ ಪ್ರಶ್ನೆಪತ್ರಿಕೆಗಳನ್ನು ನಿರಂತರವಾಗಿ ಬಿಡಿಸುವ ಅಭ್ಯಾಸದ ಜೊತೆಗೆ ಪಠ್ಯಪುಸ್ತಕಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕು. ಸಮಾಜದಲ್ಲಿ ಶಿಕ್ಷಕರಿಗೆ ಗೌರವದ ಸ್ಥಾನವಿದ್ದು, ಪಾಲಕರಿಗಿಂತಲೂ ಹೆಚ್ಚಿನ ಪ್ರಭಾವ ಬೀರುವ ಸಾಮರ್ಥ್ಯವಿದೆ. ಹೀಗಾಗಿ ಎಲ್ಲ ಮಾಧ್ಯಮಗಳ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ವಿಶೇಷ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗದಂತೆ ನಿಗಾ ವಹಿಸಬೇಕು. ಫಲಿತಾಂಶ ಸುಧಾರಣೆಗೆ ಅನುಕೂಲವಾಗುವ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಮುಂದಿನ ಒಂದೂವರೆ ತಿಂಗಳ ಅವಧಿಗೆ ಯೋಜನೆ ರೂಪಿಸಿ, ಮಕ್ಕಳನ್ನು ಲಿಖಿತ ರೂಪದಲ್ಲಿ ಮನೆಪಾಠ ಮಾಡುವಂತೆ ಪ್ರೋತ್ಸಾಹಿಸಬೇಕು. ವಿಷಯವಾರು ಪ್ರಶ್ನೆಪತ್ರಿಕೆಗಳನ್ನು ಶಾಲಾವಾರು ಸಿದ್ಧಪಡಿಸಿಕೊಂಡು, ಪ್ರಶ್ನೋತ್ತರಗಳನ್ನು ಬಿಡಿಸುವ ಅಭ್ಯಾಸಕ್ಕೆ ಉತ್ತೇಜನ ನೀಡಬೇಕು ಎಂದು ಸೂಚಿಸಿದರು.
ಕಲಿಕೆಯಲ್ಲಿ ಹಿಂದುಳಿದ ಹಾಗೂ ಸಮಸ್ಯಾತ್ಮಕ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅನುದಾನಿತ ಶಾಲೆಗಳ ಮೇಲೂ ತೀವ್ರ ನಿಗಾ ಇಡಬೇಕು. ವಸತಿನಿಲಯಗಳ ವಿದ್ಯಾರ್ಥಿಗಳ ಕಲಿಕೆಯ ಬಗ್ಗೆಯೂ ಗಮನ ಹರಿಸಿ, ಆಯಾ ವಸತಿನಿಲಯಗಳ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಕಡಿಮೆ ಅಂಕ ಪಡೆಯುತ್ತಿರುವ ವಿದ್ಯಾರ್ಥಿಗಳ ಪಾಲಕರೊಂದಿಗೆ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಸಮನ್ವಯ ಸಾಧಿಸಬೇಕು. ಒಟ್ಟಾರೆ ಮಕ್ಕಳ ಫಲಿತಾಂಶ ಸುಧಾರಣೆಗೆ ವಿಶೇಷ ಗಮನ ನೀಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಗೆ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಹೆಚ್ಚಿನ ಮಕ್ಕಳು ಶೇ.95ಕ್ಕಿಂತ ಹೆಚ್ಚು ಅಂಕ ಪಡೆಯುವಂತೆ ಸಿದ್ಧಗೊಳಿಸಬೇಕು. ಕನ್ನಡ, ಆಂಗ್ಲ, ಉರ್ದು ಹಾಗೂ ತೆಲುಗು ಮಾಧ್ಯಮದ ಪ್ರತಿ ಶಾಲೆಯ ಫಲಿತಾಂಶ ಹೆಚ್ಚಿಸಬೇಕು. ಹೆಣ್ಣು ಮಕ್ಕಳ ಫಲಿತಾಂಶದಲ್ಲಿ ಶೇ.100ರಷ್ಟು ಸಾಧನೆ ಮಾಡಬೇಕು. ಗಂಡು ಮಕ್ಕಳ ಫಲಿತಾಂಶದಲ್ಲಿಯೂ ಹೆಚ್ಚಳವಾಗಬೇಕು. ರಾಜ್ಯಮಟ್ಟದಲ್ಲಿಯೂ ಜಿಲ್ಲೆಯ ಮಕ್ಕಳು ರ‍್ಯಾಂಕ್ ಪಡೆಯುವಂತೆ ಸಿದ್ಧತೆ ನಡೆಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯ ಫಲಿತಾಂಶದ ರ‍್ಯಾಂಕ್ ಸುಧಾರಣೆಗೆ ಹೆಚ್ಚಿನ ಗಮನ ನೀಡಬೇಕು. ಇತ್ತೀಚೆಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಂದೀಪ್ ಬಾಡದ ಹಾಗೂ ನಿವೇದಿತಾ ಅವರನ್ನು ‘ನನ್ನ ಕನಸು’ ಕಾರ್ಯಕ್ರಮದಡಿ ಮುಂದಿನ ಎಸೆಸೆಲ್ಸಿ ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಬಳಸಿಕೊಳ್ಳಬೇಕು. ಅವರ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಡಿಡಿಪಿಐ ಚಿತ್ರಶೇಖರ್, ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಸವಣಗೌಡ ಹಾಲದಾಳ ಸ್ವಾಗತಿಸಿದರು.






