Yadgiri | ಬೀಜ-ಗೊಬ್ಬರ ಕೊರತೆ ನಿವಾರಣೆ, ಟಾಟಾ ಪವರ್ ಅರ್ಜಿ ತಿರಸ್ಕಾರಕ್ಕೆ ಆಗ್ರಹಿಸಿ ರೈತರಿಂದ ಪ್ರತಿಭಟನೆ

ಯಾದಗಿರಿ : ಬೀಜ ಮತ್ತು ರಸಗೊಬ್ಬರಗಳ ಕೊರತೆಯನ್ನು ತಕ್ಷಣ ನಿವಾರಿಸಬೇಕು, ಕಾಳಸಂತೆಯನ್ನು ತಡೆಗಟ್ಟಬೇಕು ಹಾಗೂ ಟಾಟಾ ಪವರ್ ಕಂಪನಿಯ ವಿದ್ಯುತ್ ವಿತರಣಾ ಪರವಾನಗಿ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್, ಮುಂಗಾರು ಹಂಗಾಮು ಆರಂಭವಾಗಿದ್ದರೂ ರೈತರಿಗೆ ಸಕಾಲಕ್ಕೆ ಬೀಜ ಹಾಗೂ ರಸಗೊಬ್ಬರ ದೊರೆಯುತ್ತಿಲ್ಲ. ಸರ್ಕಾರ ಮತ್ತು ಕೃಷಿ ಇಲಾಖೆ ಕೊರತೆಯಿಲ್ಲ ಎಂದು ಹೇಳುತ್ತಿದ್ದರೂ ರೈತರು ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಖಾಸಗಿ ಕೃಷಿ ಪರಿಕರ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ, ಗೊಬ್ಬರ ಖರೀದಿಗೆ ಕೀಟನಾಶಕ ಹಾಗೂ ಪೋಷಕಾಂಶಗಳ ಕಿಟ್‌ಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಾಯಿಸುವ ‘ಲಿಂಕ್ ಬಿಸಿನೆಸ್’ ದಂಧೆ ನಡೆಸುತ್ತಿದ್ದಾರೆ. ಇಂತಹ ಅಕ್ರಮಗಳ ವಿರುದ್ಧ ಕೃಷಿ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಉಪಾಧ್ಯಕ್ಷ ಜಮಾಲ್ ಸಾಬ್ ಮಾತನಾಡಿ, ಟಾಟಾ ಪವರ್ ಕಂಪನಿಯು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಮಾಂತರ ವಿದ್ಯುತ್ ವಿತರಣಾ ಪರವಾನಗಿಗಾಗಿ ಅರ್ಜಿ ಸಲ್ಲಿಸಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವಿದ್ಯುತ್ ಕ್ಷೇತ್ರದ ಖಾಸಗೀಕರಣದಿಂದ ಕೃಷಿ ವಲಯಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದ್ದು, ರಾಜ್ಯ ಸರ್ಕಾರ ತಕ್ಷಣವೇ ಈ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಕಾರ್ಯದರ್ಶಿ ಸುಭಾಷ್‌ಚಂದ್ರ ಬಾವನೂರ, ಅಂಬರೀಷ್ ಧಣಿ, ಮರೆಪ್ಪ ಶಕರ್‌ಬಡಿ, ಮರೆಪ್ಪ ಕೊಟ್ಟೇಕಲ್, ಸುರೇಶ ತೆಳಿಗೇರಿ, ಮುದ್ದಪ್ಪ ಸುಲುಗಿತಿ, ಹಣಮಂತ ಗುಡಿಸಲ್, ದೇವೀಂದ್ರಪ್ಪ ಪತಪುರ್ ಸೇರಿದಂತೆ ನೂರಾರು ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರೈತರ ಪ್ರಮುಖ ಬೇಡಿಕೆಗಳು :
► ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಿಗೆ ಅಗತ್ಯ ಪ್ರಮಾಣದಲ್ಲಿ ಬಿತ್ತನೆ ಬೀಜ ಹಾಗೂ ಡಿಎಪಿ, ಯೂರಿಯಾ ಗೊಬ್ಬರ ಪೂರೈಕೆ ಮಾಡಬೇಕು.
► ರೈತರು ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಲು ಹೆಚ್ಚುವರಿ ವಿತರಣಾ ಕೌಂಟರ್‌ಗಳನ್ನು ತೆರೆಯಬೇಕು.
► ‘ಲಿಂಕ್ ಬಿಸಿನೆಸ್’ ನಡೆಸುವ ಖಾಸಗಿ ಅಂಗಡಿಗಳ ವಿರುದ್ಧ ದಾಳಿ ನಡೆಸಿ ಪರವಾನಗಿ ರದ್ದುಪಡಿಸಬೇಕು.
► ಟಾಟಾ ಪವರ್ ಕಂಪನಿಯ ವಿದ್ಯುತ್ ವಿತರಣಾ ಪರವಾನಗಿ ಅರ್ಜಿಯನ್ನು ತಕ್ಷಣ ತಿರಸ್ಕರಿಸಬೇಕು.






