ಯಾದಗಿರಿ | ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ ಹೋರಾಟ: ಉಮೇಶ್ ಮುದ್ನಾಳ

ಯಾದಗಿರಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ, ಇಸ್ಪೀಟ್, ಮಟ್ಕಾ, ಕೋಳಿ ಪಂದ್ಯ ಸೇರಿ ಹಲವು ಅಕ್ರಮ ದಂಧೆಗಳನ್ನು ಕಡಿವಾಣ ಹಾಕಿರುವ ಎಸ್ಪಿ ಪ್ರಥ್ವಿಕ್ ಶಂಕರ್ ಅವರನ್ನು ವರ್ಗಾವಣೆ ಮಾಡಲು ಹುನ್ನಾರ ಮಾಡಲು ಕೆಲ ರಾಜಕಾರಣಿಗಳು ಮುಂದಾಗಿದ್ದಾರೆ. ಕೂಡಲೇ ಸರಕಾರ ವರ್ಗಾವಣೆ ಮಾಡದೇ ಅವರನ್ನು ಅವಧಿ ಪೂರ್ಣ ಮುಂದುವರೆಸಬೇಕು ಎಂದು ಸಮಾಜಿಕ ಕಾರ್ಯಕರ್ತ ಉಮೇಶ್ ಮುದ್ನಾಳ ಆಗ್ರಹಿಸಿದ್ದಾರೆ.
ಅದೆ ರೀತಿಯ ಯಾದಗಿರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಐಎಫ್ ಎಸ್ ಅಧಿಕಾರಿ ಪ್ರಭಾಕರ್ ಪ್ರಿಯದರ್ಶಿ ಅವರನ್ನು ಅವಧಿ ಪೂರ್ವದಲ್ಲಿ 6 ತಿಂಗಳ ಒಳಗೆ ಬೆಳಗಾವಿ ಜಿಲ್ಲೆಯ ಗೋಕಾಕ್ ನ ಘಟಪ್ರಭಾ ವಿಭಾಗಕ್ಕೆ ಡಿಸಿಎಪ್ ಎಂದು ಸರಕಾರ ವರ್ಗಾವಣೆ ಮಾಡಿದೆ. ಇಂತಹ ಪ್ರಮಾಣಿಕ ಅಧಿಕಾರಿಗಳನ್ನು ಅವಧಿ ಪೂರ್ವದಲ್ಲಿಯೇ ಮುಂದುವರೆಸಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಕುರಿತು ಪತ್ರಿಕಾ ಹೇಳಿ ನೀಡಿರುವ ಅವರು, ಯಾದಗಿರಿ ಎಸ್ಪಿ ಅವರು ಉತ್ತಮವಾಗಿ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಅಪರಾಧ ಕೇಸ್ ಗಳ ಕಡಿವಾಣ ಹಾಕುವ ಜೊತೆ ಅಕ್ರಮ ದಂಧೆ ಕಡಿವಾಣ ಹಾಕಿದ್ದಾರೆ. ಅರಣ್ಯಾಧಿಕಾರಿ ಪ್ರಭಾಕರ್ ಅವರು ಯಾದಗಿರಿ ಜಿಲ್ಲೆಯ ಅರಣ್ಯ ಪ್ರದೇಶ ಸಂರಕ್ಷಣೆ ಮಾಡಲು ಯಾವುದೇ ಒತ್ತಡಕ್ಕೆ ಮಣಿಯದೆ ಉತ್ತಮ ಕಾರ್ಯ ಮಾಡಿದ್ದಾರೆ. ಅವರನ್ನು ರಾಜಕೀಯ ಒತ್ತಡ ಹಾಕಿ ಅವಧಿ ಪೂರ್ವದಲ್ಲಿಯೇ ವರ್ಗಾವಣೆ ಮಾಡಿದ್ದಾರೆ. ಕೂಡಲೇ ವರ್ಗಾವಣೆ ಮಾಡಿದನ್ನು ರದ್ದು ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಸರಕಾರ ಒಂದು ವೇಳೆ ವರ್ಗಾವಣೆ ಮಾಡಲು ಮುಂದಾದರೇ ಭ್ರಷ್ಟಚಾರ ಮಾಡಿರುವ ಆರೋಪ ಹೊತ್ತ ಅಧಿಕಾರಿಗಳನ್ನು ವರ್ಗಾವಣೆ ಮಾಡಲಿ. ಆದರೆ, ಯಾವುದೇ ಕಪ್ಪು ಚುಕ್ಕೆ ಇಲ್ಲದ ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.







