Yadgiri | ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಅಭಿವೃದ್ಧಿಗೆ ಹಿನ್ನಡೆ: ಶಾಸಕ ಶರಣಗೌಡ ಕಂದಕೂರ ಅಸಮಾಧಾನ

ಯಾದಗಿರಿ : ಸರ್ಕಾರದಿಂದ ಸಮರ್ಪಕ ಅನುದಾನ ಬಿಡುಗಡೆಯಾಗದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿದ್ದು, ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅಸಮಾಧಾನ ವ್ಯಕ್ತಪಡಿಸಿದರು.
ಗುರುಮಠಕಲ್ ಕ್ಷೇತ್ರದ ಗೋಪಾಳಪುರ, ಚಿನ್ನಾಕಾರ, ಬೆಟ್ಡದಳ್ಳಿ ಹಾಗೂ ಧರ್ಮಪುರ ತಾಂಡಾ ಗ್ರಾಮಗಳಲ್ಲಿ ಕೆಕೆಆರ್‌ಡಿಬಿ ಹಾಗೂ ವಿವಿಧ ಯೋಜನೆಗಳಡಿ ಶಾಲಾ ಕೊಠಡಿಗಳು, ಅಂಗನವಾಡಿ ಕಟ್ಟಡಗಳು ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮಸ್ಥರು ಕಳೆದ ಚುನಾವಣೆಯಲ್ಲಿ ನನ್ನ ಮೇಲೆ ಮುನಿಸಿಕೊಂಡಿದ್ದರೂ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುವುದನ್ನು ನಿಲ್ಲಿಸಿಲ್ಲ. ಕೆಲಸ ಮಾಡಿದ ವ್ಯಕ್ತಿಗೆ ಕಡಿಮೆ ಕೂಲಿ ಕೊಟ್ಟರೂ ಕೆಲಸ ಬಿಡುವುದಿಲ್ಲ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಪ್ರಮುಖ ಗುರಿ ಎಂದು ಹೇಳಿದರು.
ಗೋಪಾಳಪುರ ಗ್ರಾಮದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕರು, ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ 10 ಲಕ್ಷ ರೂ. ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು. ನವಾಬುರ್ಜ್–ಗೋಪಾಳಪುರ ರಸ್ತೆ ಅಭಿವೃದ್ಧಿ, ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಇತರೆ ಮೂಲಸೌಕರ್ಯ ಕಾಮಗಾರಿಗಳಿಗೂ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ಸಾವಿರ ಶಿಕ್ಷಕರ ನೇಮಕಾತಿ ನಡೆದರೆ ಕ್ಷೇತ್ರದಲ್ಲಿರುವ ಶಿಕ್ಷಕರ ಕೊರತೆ ನಿವಾರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು, 2015-16ರಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ನಡೆದ ಅಕ್ರಮಗಳಿಂದ ಬಳಿಕ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು.
ಚಿನ್ನಾಕಾರ ಗ್ರಾಮದಲ್ಲಿ ಮಾತನಾಡಿದ ಅವರು, ದೊಡ್ಡ ಬೆಟ್ಟಕ್ಕೆ ರಸ್ತೆ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು. ಕೆಕೆಆರ್‌ಡಿಬಿ ಅನುದಾನದಿಂದ ಪರಮೇಶಪಲ್ಲಿವರೆಗೆ ರಸ್ತೆ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಪಿಡಿಒಗಳು ಸ್ಥಳೀಯ ಮಟ್ಟದಲ್ಲೇ ಪರಿಹರಿಸಬೇಕು. ಸಾರ್ವಜನಿಕ ಶೌಚಗೃಹಗಳಿಗಿಂತ ವೈಯಕ್ತಿಕ ಶೌಚಗೃಹ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಸೂಕ್ತ ಎಂದು ಸಲಹೆ ನೀಡಿದರು.
ಪಿಂಚಣಿ ಸಿಗದೆ ಮಹಿಳೆಯರ ಅಳಲು :
ಗೋಪಾಳಪುರದಲ್ಲಿ ಅಂಗವಿಕಲ ಹಾಗೂ ವೃದ್ಧಾಪ್ಯ ವೇತನ ಹಲವು ತಿಂಗಳುಗಳಿಂದ ಬಂದಿಲ್ಲ ಎಂದು ಮಹಿಳೆಯರು ಶಾಸಕ ಶರಣಗೌಡ ಕಂದಕೂರ ಎದುರು ಅಳಲು ತೋಡಿಕೊಂಡರು. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕರು, ರಾಜ್ಯದಲ್ಲಿ ಲಕ್ಷಾಂತರ ಫಲಾನುಭವಿಗಳಿಗೆ ತಾಂತ್ರಿಕ ಕಾರಣಗಳಿಂದ ಪಿಂಚಣಿ ಸಿಗುತ್ತಿಲ್ಲ. ಅಧಿಕಾರಿಗಳು ಗ್ರಾಮ ಮಟ್ಟದಲ್ಲೇ ಸಮಸ್ಯೆ ಪರಿಹರಿಸಬೇಕು ಎಂದು ಸೂಚಿಸಿದರು.
ಪಡಿತರ ಮತ್ತು ಕುಡಿಯುವ ನೀರಿನ ಸಮಸ್ಯೆ :
ರಾಜ್ಯದಲ್ಲಿ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಲೋಪಗಳಿದ್ದು, ಜನಸಂಖ್ಯೆ ಹೆಚ್ಚಿರುವ ಗ್ರಾಮಗಳಲ್ಲಿ ಹೊಸ ನ್ಯಾಯಬೆಲೆ ಅಂಗಡಿಗಳನ್ನು ಆರಂಭಿಸುವ ಅಗತ್ಯವಿದೆ ಎಂದು ಸರ್ಕಾರದ ಗಮನಕ್ಕೆ ತಂದಿರುವುದಾಗಿ ಶಾಸಕರು ಹೇಳಿದರು.
ಸ್ವಾತಂತ್ರ್ಯ ಬಂದು ದಶಕಗಳಾದರೂ ಜನರು ಇನ್ನೂ ಪಡಿತರ, ಶುದ್ಧ ಕುಡಿಯುವ ನೀರು ಹಾಗೂ ಮೂಲಸೌಲಭ್ಯಗಳಿಗಾಗಿ ಪರದಾಡುತ್ತಿರುವುದು ನೋವಿನ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಚರಂಡಿ ಸ್ವಚ್ಛತೆಗೆ ಹಣವಿಲ್ಲ ಎಂದರೆ ದುಃಖಕರ :
ಗ್ರಾಮ ಪಂಚಾಯಿತಿಗಳಲ್ಲಿ ಚರಂಡಿ ಸ್ವಚ್ಛಗೊಳಿಸಲು ಸಹ ಹಣವಿಲ್ಲ ಎಂಬುದು ತಲೆತಗ್ಗಿಸುವ ವಿಚಾರ. ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಿಸದಿದ್ದರೆ ಜನರು ಜನಪ್ರತಿನಿಧಿಗಳನ್ನು ಪ್ರಶ್ನಿಸುತ್ತಾರೆ. ಅಗತ್ಯವಿದ್ದರೆ ಇಂತಹ ಸಣ್ಣಪುಟ್ಟ ಕಾಮಗಾರಿಗಳಿಗೆ ಶಾಸಕರ ಅನುದಾನ ಬಳಸಲು ಸಿದ್ಧ ಎಂದು ಶರಣಗೌಡ ಕಂದಕೂರ ಹೇಳಿದರು.
ಈ ಸಂದರ್ಭದಲ್ಲಿ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆಯ ಎಇಇ ಶರಣಬಸವ, ನಿರ್ಮಿತಿ ಕೇಂದ್ರದ ಅಧಿಕಾರಿ ಕಿರಣಕುಮಾರ, ಉಪ ತಹಸೀಲ್ದಾರ ಬಸವರಾಜ ಸಜ್ಜನ್, ಬಿಇಒ ಈರಪ್ಪ ಕನ್ನಳ್ಳಿ, ಸಿಡಿಪಿಒ ಶರಣಬಸವ, ಪಿಡಿಒ ಮಲ್ಲಿಕಾರ್ಜುನ ಸಜ್ಜನ್, ಅನುರಾಧ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಅಜಯರಡ್ಡಿ ಎಲ್ಹೇರಿ, ಮಹೇಂದ್ರರಡ್ಡಿ ಕಂದಕೂರ, ಈಶ್ವರ ನಾಯಕ, ಮಲ್ಲಿಕಾರ್ಜುನ ಅರುಣಿ, ಆನಂದ ವಡವಟ, ನರಸಿಂಹಲು ಚಿಂತಗುಂಟಾ, ಆನಂದ ಶಿಳ್ಳೆ, ನಾರಾಯಣ ಕೊಂಕಲ್, ಭೀಮರಾಯ ಕೊಂಕಲ್, ಶರಣಗೌಡ ಗುಂಜನೂರ, ಮೋದಿನ್‌ಸಾಬ ಗುಂಜನೂರ, ಬಸವರಾಜ ಹಳ್ಳಿ, ಬುಗ್ಗಾರಡ್ಡಿ ಧರ್ಮಾಪೂರ, ಸೇರಿದಂತೆ ಇತರರಿದ್ದರು.






