Yadgiri | ಕಾರ್ಖಾನೆಯ ಹೊಗೆಯಿಂದ ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆ: ಕುಮಾರ್ ಎಸ್.ತೆಳಿಗೇರಿ ಆರೋಪ

ಯಾದಗಿರಿ: ಕಾರ್ಖಾನೆಯಿಂದ ಹೊರಸೂಸಲಾಗುತ್ತಿರುವ ಕಲುಷಿತ ಹೊಗೆಯಿಂದ ಸುತ್ತಮುತ್ತಲಿನ ಪರಿಸರ ಮಲಿನಗೊಳ್ಳುತ್ತಿದ್ದು, ತುಮಕೂರು ಸೇರಿದಂತೆ ಹಲವು ಗ್ರಾಮಗಳ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹೊಗೆಯ ದುಷ್ಪರಿಣಾಮದಿಂದ ಜನರು ವಿವಿಧ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವಡಗೇರ ತಾಲ್ಲೂಕು ಅಧ್ಯಕ್ಷ ಕುಮಾರ್ ಎಸ್. ತೆಳಿಗೇರಿ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಜಿಲ್ಲೆಯ ವಡಗೇರ ತಾಲ್ಲೂಕಿನ ತುಮಕೂರು ಗ್ರಾಮದಲ್ಲಿರುವ ಕೋರ್ ಗ್ರೀನ್ ಶುಗರ್ ಕಾರ್ಖಾನೆಯಿಂದ ಹೊರಬರುತ್ತಿರುವ ಹೊಗೆಯಿಂದ ಗ್ರಾಮೀಣ ಪ್ರದೇಶದ ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ದೂರಿದರು.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾರ್ಖಾನೆಗೆ ಭೇಟಿ ನೀಡಿ, ಹೊಗೆ ಹೊರಸೂಸುವಿಕೆಯ ಪ್ರಮಾಣ ಹಾಗೂ ಪರಿಸರ ಮಾಲಿನ್ಯದ ಕುರಿತು ಪರಿಶೀಲನೆ ನಡೆಸಬೇಕು. ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.




