Yadgiri | ಆ.31ರಂದು ಐತಿಹಾಸಿಕ ದಂಡಗುಂಡ ಬಸವಣ್ಣ ಜಾತ್ರೆ

ಯಾದಗಿರಿ: ನಗರದ ವಾಲ್ಮೀಕಿ ನಗರದ ಬೆಟ್ಟದ ಮೇಲಿರುವ ಐತಿಹಾಸಿಕ ದಂಡಗುಂಡ ಬಸವಣ್ಣ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮೂರನೇ ಸೋಮವಾರವಾದ ಆಗಸ್ಟ್ 31ರಂದು ವಾರ್ಷಿಕ ದಂಡಗುಂಡ ಬಸವಣ್ಣ ಜಾತ್ರೆ ಭಕ್ತಿಭಾವದಿಂದ ನಡೆಯಲಿದೆ ಎಂದು ದೇವಸ್ಥಾನದ ಮುಖ್ಯ ಅರ್ಚಕ ಸಿದ್ದಯ್ಯಸ್ವಾಮಿ ಹಿರೇಮಠ ತಿಳಿಸಿದ್ದಾರೆ.
ಬೆಳಿಗ್ಗೆ ಬಸವಣ್ಣ ಗದ್ದುಗೆಗೆ ರುದ್ರಾಭಿಷೇಕ ಹಾಗೂ 1008 ಬಿಲ್ವಾರ್ಚನೆ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಬಸವಣ್ಣನ ಪಲ್ಲಕ್ಕಿ ಉತ್ಸವ ಹನುಮಾನ್ ದೇವಸ್ಥಾನದಿಂದ ಆರಂಭವಾಗಿ ಗಾಂಧಿಚೌಕ್ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೇವಸ್ಥಾನ ತಲುಪಲಿದೆ. ಸಂಜೆ 6.30ಕ್ಕೆ ಭವ್ಯ ರಥೋತ್ಸವ ನಡೆಯಲಿದ್ದು, ಬಳಿಕ ಧರ್ಮಸಭೆ ಜರುಗಲಿದೆ.
ಧರ್ಮಸಭೆಯಲ್ಲಿ ಅಬ್ಬೆತುಮಕೂರಿನ ಅನುಗ್ರಹ ಮಠದ ಡಾ. ಗಂಗಾಧರ ಮಹಾಸ್ವಾಮೀಜಿ, ಗುರುಮಿಠಕಲ್ ಖಾಸಾ ಮಠದ ಶಾಂತವೀರ ಮಹಾಸ್ವಾಮೀಜಿ, ದಾಸಬಾಳ ಮಠದ ವಿರೇಶ್ವರ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ವಿವಿಧ ರಾಜಕೀಯ ಮುಖಂಡರು, ಉದ್ಯಮಿಗಳು ಹಾಗೂ ಸಮಾಜದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾತ್ರಿ ಧರ್ಮಸಭೆಯ ಬಳಿಕ ಭಕ್ತರಿಂದ ಭಜನೆ ಸ್ಪರ್ಧೆ ಹಾಗೂ ಗ್ರಾಮೀಣ ಕ್ರೀಡೆಯಾದ ಕೈಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಗುತ್ತದೆ.
ಜಾತ್ರೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಯುವ ಬಳಗದ ಕಾರ್ಯಕರ್ತರು ಜಾತ್ರೆಯನ್ನು ಯಶಸ್ವಿಗೊಳಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.






