ಯಾದಗಿರಿ | ʼಜೂ.14ರಂದು ಬಂಜಾರ ಭವನ ಉದ್ಘಾಟಿಸದಿದ್ದರೆ ಸಿಎಂ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದುʼ

ಯಾದಗಿರಿ: ಕಳೆದ ಮೂರು ವರ್ಷಗಳ ಹಿಂದೆಯೇ ನಿರ್ಮಾಣಗೊಂಡಿರುವ ಚಿತ್ತಾಪುರ ರಸ್ತೆಯಲ್ಲಿರುವ ಬಂಜಾರ ಭವನದ ಉದ್ಘಾಟನೆಯನ್ನು ಜೂ.14 ರಂದು ನಗರಕ್ಕೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟಿಸಲು ಜಿಲ್ಲಾಡಳಿತ ಕೂಡಲೇ ವ್ಯವಸ್ಥೆ ಮಾಡಬೇಕು, ಇಲ್ಲವಾದರೇ ಅಂದು ಕಪ್ಪು ಬಾವುಟ ಪ್ರದರ್ಶಿಸಲಾಗುವುದೆಂದು ಬಂಜಾರ ಸಮಾಜದ ಮುಖಂಡರು ಎಚ್ಚರಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದೇವರಾಜ್ ನಾಯಕ್, ಬಂಜಾರ ಸಮಾಜದ ಹಿರಿಯ ಮುಖಂಡ ಜನಾರ್ಧನ ರಾಠೋಡ್ ಹಾಗೂ ನಗರಸಭೆ ಮಾಜಿ ಸದಸ್ಯ ಶಂಕರ ರಾಠೋಡ್ ಅವರು, ಅಂದು ಸಿಎಂ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆ ಮಾಡಲಿದ್ದು, ಅದೇ ವೇಳೆ ಬಂಜಾರ ಭವನದ ಉದ್ಘಾಟನೆ ಮಾಡಿಸಲು ಜಿಲ್ಲಾಡಳಿತ ಕೂಡಲೇ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ಜೂ.14 ರಂದು ಸಿಎಂ ಅವರಿಂದ ಭವನದ ಉದ್ಘಾಟನೆ ಆಗಬೇಕು. ಇಲ್ಲದಿದ್ದರೇ ಬಂಜಾರ ಸಮಾಜದಿಂದ ಸಿಎಂ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದೆಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರು, ತಾಪಂ ಮಾಜಿ ಸದಸ್ಯ ಯಂಕಪ್ಪ, ನಿವೃತ್ತ ಎಎಸ್ ಐ ಮೇಘನಾಥ ಚವ್ಹಾಣ ಸೇರಿದಂತೆ ಇತರರಿದ್ದರು.