Yadgiri | ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಆರೋಪ : ಹಿಟಾಚಿ, ಜೆಸಿಬಿ ಯಂತ್ರ ಜಪ್ತಿ, ಪ್ರಕರಣ ದಾಖಲು

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಹೆಮ್ಮಡಗಿ ಹಾಗೂ ಅಡ್ಡೊಡಗಿ ಗ್ರಾಮಗಳ ವ್ಯಾಪ್ತಿಯ ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿಗಾರಿಕೆಗೆ ಬಳಸಲಾಗುತ್ತಿದ್ದ ಎಂಟು ಹಿಟಾಚಿ ಮತ್ತು ಜೆಸಿಬಿ ಯಂತ್ರಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ವಿರೇಶ ತಿಳಿಸಿದ್ದಾರೆ.
ಜಿಲ್ಲೆಯ ಸುರಪುರ, ಶಹಾಪುರ, ವಡಗೇರಾ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಅಕ್ರಮ ಮರಳು, ಮುರಂ ಹಾಗೂ ಇತರೆ ಉಪಖನಿಜಗಳ ಗಣಿಗಾರಿಕೆ, ದಾಸ್ತಾನು ಮತ್ತು ಸಾಗಾಣಿಕೆ ನಡೆಯುತ್ತಿರುವ ಬಗ್ಗೆ ಇಲಾಖೆ ನಿರಂತರವಾಗಿ ದೂರುಗಳನ್ನು ಸ್ವೀಕರಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳು, ವಾಹನಗಳು ಹಾಗೂ ಯಂತ್ರೋಪಕರಣಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಮರಳು ಉಸ್ತುವಾರಿ ಸಮಿತಿಗಳಿಗೆ ಜಿಲ್ಲಾಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದರು.
ಜೂನ್ 12ರಂದು ಹೆಮ್ಮಡಗಿ ಮತ್ತು ಅಡ್ಡೊಡಗಿ ಗ್ರಾಮಗಳ ವ್ಯಾಪ್ತಿಯ ಕೃಷ್ಣಾ ನದಿ ಪಾತ್ರದಲ್ಲಿ ಹಿಟಾಚಿ ಹಾಗೂ ಜೆಸಿಬಿ ಯಂತ್ರಗಳ ಮೂಲಕ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಅಕ್ರಮ ಗಣಿಗಾರಿಕೆಗೆ ಬಳಸಲಾಗುತ್ತಿದ್ದ ಎಂಟು ಯಂತ್ರಗಳನ್ನು ವಶಕ್ಕೆ ಪಡೆದು ಸುರಪುರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.
ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 0150/2026 ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಅಕ್ರಮ ಮರಳು ಮತ್ತು ಉಪಖನಿಜಗಳ ಗಣಿಗಾರಿಕೆ, ದಾಸ್ತಾನು ಹಾಗೂ ಸಾಗಾಣಿಕೆಯನ್ನು ತಡೆಗಟ್ಟುವಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಮರಳು ಉಸ್ತುವಾರಿ ಸಮಿತಿಗಳು ವಿಫಲವಾದಲ್ಲಿ, ಸಂಬಂಧಪಟ್ಟ ಸದಸ್ಯರನ್ನೇ ನೇರ ಹೊಣೆಗಾರರನ್ನಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.






